ಬೆಂಗಳೂರು: ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರನ್ನು ನಿಂದಿಸಿ, ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಘಟನೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಪ್ರಕರಣದ ಎಫ್ ಐಆರ್ ರದ್ದುಪಡಿಸುವಂತೆ ಕೋರಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ನ್ಯಾಯಪೀಠ, ಶಾಸಕರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದೆ.
ಭಯೋತ್ಪಾದಕರನ್ನು ಪೊಲೀಸರು ಹಿಡಿದು ತಂದರೆ ಆಗಲೂ ಪೊಲೀಸ್ ಠಾಣೆಗೆ ನುಗ್ತೀರಾ? ಪೊಲೀಸರನ್ನು ಪ್ರಶ್ನೆ ಮಾಡುತ್ತೀರಾ? ಇದನ್ನೆಲ್ಲ ಒಪ್ಪಲು ಸಾಧ್ಯವಿಲ್ಲ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರನ್ನು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ.
ಪೊಲೀಸ್ ಠಾಣೆಗೆ ಏಕೆ ಹೋಗಿದ್ದು? ಶಾಸಕರಾದ ಮಾತ್ರಕ್ಕೆ ಠಾಣೆಗೆ ಹೋಗಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಬಹುದೇ? ಎಂದು ನ್ಯಾಯಪೀಠ ಪ್ರಶ್ನಿಸಿದೆ.
ನಾಳೆ ನ್ಯಾಯಾಧೀಶರು ಹೇಗೆ ಕೆಲಸ ಮಾಡುತ್ತಾರೆ ಎಂದು ನೋಡಲು ಕೋರ್ಟ್ ಗೆ ಬಂದು ನಮ್ಮ ಮುಂದೆ ಕುಳಿತರೆ ಹೇಗೆ? ಆಗ ಏನು ಮಾಡುವುದು? ಶಾಸಕರು ಇರುವುದು ಶಾಸನ ರೂಪಿಸಲು. ಅದರಂತೆ ಶಾಸನ ರಚಿಸಲು ತಮ್ಮದೇ ಆದ ಕೊಡುಗೆ ನೀಡಬೇಕು ಹೊರತುಪಡಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವುದಲ್ಲ ಎಂದು ಪೀಠ ತಿಳಿಸಿದೆ.