ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕೆಂಬ ವಕೀಲರ ಸಂಘದ ದಶಕಗಳ ಬೇಡಿಕೆಯ ವಿಚಾರದಲ್ಲಿ ಮಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಇಂದು ಹೋರಾಟ ಸಮಿತಿ ರಚನೆಯಾಗಿದೆ. ಮಂಗಳೂರು ವಕೀಲರ ಸಂಘದ ಸದಸ್ಯರು, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಉಪಸ್ಥಿತಿಯಲ್ಲಿ ಸಭೆ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ತಾಲೂಕು ವಕೀಲರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಭಾಗವಹಿಸಿ, ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ತಮ್ಮ ಬೆಂಬಲ ಸೂಚಿಸಿದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ. ರಾಘವೇಂದ್ರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮೂಲಭೂತ ಸೌಕರ್ಯ ಇರುವ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಆದರೆ, ಅಕ್ಕಪಕ್ಕದ ಐದು ಜಿಲ್ಲೆಗಳ ಜನರಿಗೆ ಉಪಯೋಗವಾಗುತ್ತದೆ. ಈಗಾಗಲೇ ಮಂಗಳೂರು ನಗರದ ಜೈಲು ಬೇರೆಡೆ ಸ್ಥಳಾಂತರವಾಗುವುದರಿಂದ, ಅಲ್ಲಿ ಸುಮಾರು ಐದಾರು ಎಕರೆ ಸ್ಥಳ ಹೈಕೋರ್ಟ್ ಪೀಠ ಸ್ಥಾಪನೆಗೆ ಸೂಕ್ತವಾಗಿದೆ. ಮಂಗಳೂರು ನಗರಕ್ಕೆ ಅಂತಾರಾಷ್ಟ್ರೀಯ ವಿಮಾನ ಸೌಲಭ್ಯ, ರಸ್ತೆ ಸಂಚಾರ ಸೌಲಭ್ಯವೂ ಇದೆ ಎಂದು ಎಚ್.ವಿ. ರಾಘವೇಂದ್ರ ಈ ವೇಳೆ ಹೇಳಿದರು.
ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಕೋಸ್ತಾ ಎಂ., ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ ಮಾಜಿ ಉಪಾಧ್ಯಕ್ಷ ಟಿ.ಎನ್. ಪೂಜಾರಿ ಸಭೆಯಲ್ಲಿ ಉಪಸ್ಥಿತರಿದ್ದು ಬೆಂಬಲ ಸೂಚಿಸಿದರು. ಹಿರಿಯ ವಕೀಲರುಗಳಾದ ಎಂ.ಪಿ. ನೊರೊನ್ಹ, ಪೃಥ್ವಿರಾಜ್ ರೈ, ಅಶೋಕ್ ಅರಿಗ, ಎಂ.ಆರ್. ಬಲ್ಲಾಳ್, ಮನುರಾಜ್, ದಿನಕರ ಶೆಟ್ಟಿ, ಆಶಾ ನಾಯಕ್, ಸುಮನಾ ಶರಣ್, ಜಗದೀಶ ಶೇಣವ, ಸುಜಿತ್ ಕುಮಾರ್, ಗಿರೀಶ್ ಶೆಟ್ಟಿ ಉಪಸ್ಥಿತರಿದ್ದು ಹೋರಾಟದ ರೂಪುರೇಷೆ ಕುರಿತು ಮಾತನಾಡಿದರು.
ಮಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಹೊಸಮನೆ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಜ್ಯೋತಿ ಸುವರ್ಣ ವಂದಿಸಿದರು.