ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಯಾವುದೇ ತಕ್ಷಣದ ಕ್ರಮ ಕೈಗೊಳ್ಳಬಾರದು ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಹೈಕೋರ್ಟ್ ಸೂಚನೆ ನೀಡಿದೆ. ಆ ಮೂಲಕ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಸಿದ್ದರಾಮಯ್ಯ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿ ಪ್ರಾಸಿಕ್ಯೂಶನ್‌ಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದರು. ಆ.29ರ ವರೆಗೆ ಮಧ್ಯಂತರ ತಡೆ ನೀಡಲಾಗಿದ್ದು, ಅಂದು ಹೈಕೋರ್ಟ್‌ನಲ್ಲಿ ಮುಂದಿನ ವಿಚಾರಣೆ ನಡೆಯಲಿದೆ.
ರಾಜ್ಯಪಾಲರ ಕ್ರಮವು ಕಾನೂನು ಬಾಹಿರ ಮತ್ತು ಕಾನೂನಿನ ಆಧಾರ ರಹಿತ ಮತ್ತು ಅವರ ಪ್ರಾಸಿಕ್ಯೂಶನ್‌ಗೆ ಅವಕಾಶ ನೀಡುವುದರಿಂದ, ತಮ್ಮ ಖ್ಯಾತಿಗೆ ಹಾನಿ ಮತ್ತು ಆಡಳಿತವನ್ನು ಅಡ್ಡಿಪಡಿಸು ಅಪಾಯವಿದೆ ಮತ್ತು ಸಂಭಾವ್ಯ ರಾಜಕೀಯ ಅಸ್ಥಿರತೆಗೆ ಕಾರಣವಾಗುತ್ತದೆ ಎಂದು ಸಿದ್ದರಾಮಯ್ಯ ಪರ ವಕೀಲರು ವಾದಿಸಿ, ಮಧ್ಯಂತರ ಪರಿಹಾರ ಕೋರಿದ್ದರು. ಸಿದ್ದರಾಮಯ್ಯ ಪರ ಖ್ಯಾತ ವಕೀಲ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿದ್ದರು.