ಮಂಗಳೂರು: ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರನ್ನು ಗಡಿಪಾರು ಮಾಡುವ ಜಿಲ್ಲಾಡಳಿತದ ಆದೇಶ ಪ್ರಶ್ನಿಸಿ ಕಾನೂನು ಹೋರಾಟ ನಡೆಸಲಾಗುವುದು ಎಂದು ವೇದಿಕೆಯ ದಕ್ಷಿಣ ಪ್ರಾಂತದ ಸಹ ಸಂಯೋಜಕ ಮಹೇಶ್ ಕಡಗದಾರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿಯ ಕಾರ್ಯಸೂಚಿ ಅಳವಡಿಸಿಕೊಂಡಿದೆ. ಜಿಲ್ಲೆಯಲ್ಲಿ ನಡೆದಿರುವ ವಿದ್ಯಮಾನಗಳನ್ನು ಗಮನಿಸಿದರೆ ಆಡಳಿತ ಯಂತ್ರವನ್ನು ಬಳಸಿಕೊಂಡು ಹಿಂದೂ ಕಾರ್ಯಕರ್ತರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಯತ್ನ ನಡೆಯುತ್ತಿದೆ. ಹಿಂದೂ ಜಾಗರಣ ವೇದಿಕೆಯ ಮುಖಂಡರುಗಳಾದ ಪುತ್ತೂರಿನ ದಿನೇಶ್ ಪಂಜಿಗ, ಯಶೋಧರ ಬಳಾಲು, ಅವಿನಾಶ್ ಪುರುಷರ ಕಟ್ಟೆ, ಪ್ರವೇಶ್ ಹಾಗೂ ಅಕ್ಷಯ್ ರಜಪೂತ್ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ ಎಂದು ಅವರು ತಿಳಿಸಿದರು.
ವೇದಿಕೆಯು ಕಾರ್ಯಕರ್ತರ ಮೇಲೆ ಹಾಕಿರುವ ಕೇಸ್ ಮತ್ತು ಮಾನಸಿಕ ಹಿಂಸೆ ಮೆಟ್ಟಿನಿಂತು ಕಾರ್ಯಕರ್ತರನ್ನು ರಕ್ಷಿಸಿರುವ ಸಂಘಟನೆ. ಇಂತಹ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ. ಜಿಲ್ಲಾಡಳಿತ ಕ್ರಮವನ್ನು ಜನರ ಮುಂದಿಟ್ಟು ಆಂದೋಲನ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸಂಘಟನೆ ಪ್ರಮುಖರಾದ ರವಿರಾಜ್ ಕಡಬ, ಹರೀಶ್ ಶಕ್ತಿನಗರ, ಹರ್ಷಿತ್, ನರಸಿಂಹ ಮಾನಿ ಮುಂತಾದವರು ಉಪಸ್ಥಿತರಿದ್ದರು.