ತುಮಕೂರು: ಜಿಲ್ಲೆಯ ಐತಿಹಾಸಿಕ ಕಲ್ಲೇಶ್ವರ ದೇವಸ್ಥಾನದ ರಥಕ್ಕೆ ಬೆಂಕಿ ಇಟ್ಟಿರುವ ಪ್ರಕರಣದ ಸಂಬಂಧ ಪೊಲೀಸರು ಓರ್ವ ಆರೋಪಿಯನ್ನು ಬಂಧನ ಮಾಡಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ನಿಟ್ಟೂರು ಬಳಿಯ ಪುರ ಗ್ರಾಮದ ಕಲ್ಲೇಶ್ವರ ದೇವಸ್ಥಾನದ ಬಳಿ ರಥವನ್ನು ನಿಲ್ಲಿಸಲಾಗಿತ್ತು. ಆದರೆ ನಿನ್ನೆ ಮಧ್ಯಾಹ್ನದ ವೇಳೆಗೆ ಏಕಾಏಕಿ ರಥದ ಗೋಡೌನ್ನಲ್ಲಿ ಬೆಂಕಿ ಕಾಣಿಸಿಕೊಂಡು, ರಥ ಬೆಂಕಿಯ ಕೆನ್ನಾಲಿಗೆಗೆ ಧಗಧಗನೇ ಹೊತ್ತಿ ಉರಿದು ಸಂಪೂರ್ಣವಾಗಿ ಆಹುತಿಯಾಗಿತ್ತು.
ಆ ವೇಳೆ ಗ್ರಾಮಸ್ಥರು ಮೇಲ್ನೋಟಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕೆ ವ್ಯಕ್ತಪಡಿಸಿದ್ದರು. ಇನ್ನು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದರು. ಆದರೆ ಉತ್ತರ ಪ್ರದೇಶದ ಮೂಲಕ ವ್ಯಕ್ತಿಯೋರ್ವ ರಥಕ್ಕೆ ಬೆಂಕಿ ಇಟ್ಟಿರುವ ಆರೋಪ ಕೇಳಿ ಬಂದಿದ್ದು, ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಯುಪಿಯ ಘೋರಕ್ಪುರ ಮೂಲಕ 32 ವರ್ಷದ ಉದಾರಿ ಎಂಬಾತನನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಆರೋಪಿ ಉದಾರಿ ತೆಂಗಿನ ಗರಿಗಳನ್ನು ರಥದ ಪಕ್ಕ ಹಾಕಿ ಬೆಂಕಿ ಹಚ್ಚಿದ್ದನ್ನು ಪುರ ಗ್ರಾಮದ ರೇಣುಕಪ್ಪ, ಶಾಂತರಾಜು ಎಂಬವರು ಗಮನಿಸಿದ್ದರಂತೆ. ಬಳಿಕ ಆರೋಪಿಯನ್ನ ಹಿಡಿದು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮುಜುರಾಯಿ ಇಲಾಖೆಗೆ ಸೇರಿದ ಪುರಾತನ ಕಲ್ಲೇಶ್ವರ ದೇವಾಲಯದ ರಥ ಸುಟ್ಟಿರುವುದರಿಂದ ಸುಮಾರು 20 ಲಕ್ಷ ರೂಪಾಯಿ ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ. ಐಪಿಸಿ 436 ರ ಅಡಿ ಸಾರ್ವಜನಿಕ ಆಸ್ತಿ ಹಾನಿ ಅಡಿ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಗ್ರಾಮದಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರಿಂದ ಮುಂಜಾಗ್ರತಾ ಕ್ರಮವಹಿಸಿದ್ದಾರೆ.