ಹುಬ್ಬಳ್ಳಿ: ಇಲ್ಲಿನ ಈಶ್ವರನಗರದ ಶ್ರೀ ವೈಷ್ಣೋದೇವಿ ದೇವಸ್ಥಾನದ ಧರ್ಮದರ್ಶಿ ದೇವೇಂದ್ರಪ್ಪ ಮಹಾದೇವಪ್ಪ ವನಹಳ್ಳಿ (63 ಕೊಲೆಯಾದ ಕೇವಲ 24 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಟೊಚಾಲಕ, ಕಮರಿಪೇಟೆ ಜಿ. ಅಡ್ಡಾ ನಿವಾಸಿ ಸಂತೋಷ ಬೋಜಗಾರ ಬಂಧಿತ ಆರೋಪಿ. ದೇವಪ್ಪಜ್ಜನ ಪೂಜಾ ವಿಧಾನದಿಂದಲೇ ನಾವು ಆರ್ಥಿಕವಾಗಿ ಹಾಳಾಗಲು ಕಾರಣ, ಮಾನಸಿಕ ತೊಂದರೆ ಅನುಭವಿಸಲು ಕಾರಣ. ಹೀಗಾಗಿ ಹತ್ಯೆ ಮಾಡಿರುವುದಾಗಿ ತನಿಖೆ ವೇಳೆ ಆರೋಪಿ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮಂದಿರದ ಗೇಟ್ ಬಳಿ ಭಾನುವಾರ ಸಂಜೆ ಆರೋಪಿಯು ಮಹಾದೇವಪ್ಪರನ್ನು ಹತ್ಯೆ ಮಾಡಿ ಪರಾರಿಯಾಗಿದ್ದ. ಖಚಿತ ಮಾಹಿತಿಯ ಆಧಾರದಲ್ಲಿ ಸೋಮವಾರ ರಾತ್ರಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.