ಲಕ್ನೊ: ಹಬ್ಬಗಳಿಗೆ ಗಂಡನ ಮನೆಯಿಂದ ತವರು ಮನೆಗೆ ಹೋಗಬೇಕೆಂಬ ಬಯಕೆ ಪ್ರತಿಯೊಬ್ಬ ವಿವಾಹಿತ ಮಹಿಳೆಗೆ ಆಸೆಯಿರುತ್ತದೆ. ಆದರೆ ಇಲ್ಲೊಬ್ಬ ಪಾಪಿ ಗಂಡ ರಕ್ಷಾ ಬಂಧನ ಹಬ್ಬದ ದಿನ ತವರು ಮನೆಗೆ ಹೋಗುತ್ತೇನೆ ಎಂದ ಹೆಂಡತಿಯ ಮೂಗನ್ನೇ ಕತ್ತರಿಸಿ ವಿಕೃತಿ ಮೆರೆದಿದ್ದಾನೆ.
ಉತ್ತರ ಪ್ರದೇಶದ ಹಾರ್ದೊಯಿ ಜಿಲ್ಲೆಯಲ್ಲಿ ಇಂತಹ ಘಟನೆ ನಡೆದಿದೆ. ನಾಳೆ ರಕ್ಷಾ ಬಂಧನ ಇದೆ. ನಾನು ನನ್ನ ತವರು ಮನೆಗೆ ಹೋಗಿ ಅಣ್ಣಂದಿರಿಗೆ ರಾಖಿ ಕಟ್ಟಿ ಬರುತ್ತೇನೆ ಎಂದು ಮಹಿಳೆಯೊಬ್ಬಳು ಹೇಳಿದ್ದಾಳೆ. ಇಷ್ಟಕ್ಕೆ ಕೋಪಗೊಂಡ ಗಂಡ ಹೆಂಡತಿಯ ಮೂಗು ಕತ್ತರಿಸಿದ್ದಾನೆ.
ಅಕ್ಕಪಕ್ಕದವರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡ ಮಹಿಳೆಗೆ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಯಲ್ಲಿ ಈ ಬಗ್ಗೆ ಮಾತನಾಡಿರುವ ಮಹಿಳೆ ಗಂಡನ ಕೃತ್ಯದ ಬಗ್ಗೆ ಹೇಳಿದ್ದಾಳೆ.
ಹೆಂಡತಿಯ ಮೂಗು ಕತ್ತರಿಸಿದಾತನನ್ನು ರಾಹುಲ್ ಬನಿಯಾನಿ ಎಂದು ಎಂದು ಗುರುತಿಸಲಾಗಿದೆ. ರಾಹುಲ್ ಪತ್ನಿ ಅನಿತಾ ಗಾಯಗೊಂಡ ಮಹಿಳೆ. ಪತ್ನಿಗೆ ಎಲ್ಲೇ ಹೋಗುತ್ತೇನೆಂದರೂ ಈತ ಬಿಡುತ್ತಿರಲಿಲ್ಲವಂತೆ. ಆದರೆ ಹಬ್ಬದ ದಿನ ತವರು ಮನೆಗೆ ಹೋಗುತ್ತೇನೆ ಎಂದು ಹಠ ಹಿಡಿದದ್ದಕ್ಕೆ ರಾಹುಲ್ ಈ ದುಷ್ಕೃತ್ಯ ಎಸಗಿದ್ದಾನೆ. ಮಹಿಳೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.