Monday, July 15, 2024
Homeಅಪರಾಧಹೈದರಾಬಾದ್: 6 ವರ್ಷದ ಬಾಲಕಿಯ ಅಪಹರಣ, ಅತ್ಯಾಚಾರ, ಭೀಕರ ಕೊಲೆ: ದುರುಳ ಬಲರಾಮ್‌ ಬಂಧಿತ

ಹೈದರಾಬಾದ್: 6 ವರ್ಷದ ಬಾಲಕಿಯ ಅಪಹರಣ, ಅತ್ಯಾಚಾರ, ಭೀಕರ ಕೊಲೆ: ದುರುಳ ಬಲರಾಮ್‌ ಬಂಧಿತ

ಹೈದರಾಬಾದ್:‌ ತೆಲಂಗಾಣದಲ್ಲಿ ಟ್ರಕ್‌ ಚಾಲಕನೊಬ್ಬ 6 ವರ್ಷದ ಬಾಲಕಿಯನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿ, ಭೀಕರವಾಗಿ ಕೊಲೆ ಮಾಡಿದ್ದಾನೆ. ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯಲ್ಲಿ ಗುರುವಾರ (ಜೂನ್‌ 13) ರಾತ್ರಿ ಭೀಕರ ಕೃತ್ಯ ನಡೆದಿದೆ. ಕಂದಮ್ಮನನ್ನು ಅಪಹರಿಸಿ, ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯನ್ನು ಕೊಂದು ನಿರ್ಜನ ಪ್ರದೇಶದಲ್ಲಿ ಎಸೆದ ದುರುಳನನ್ನು ಬಲರಾಮ್‌ ಎಂದು ಗುರುತಿಸಲಾಗಿದೆ.

ಈತನು ಉತ್ತರ ಪ್ರದೇಶದವನಾಗಿದ್ದು, ಟ್ರಕ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಬಾಲಕಿಯು ತಾಯಿ ಜತೆ ರೈಸ್‌ ಮಿಲ್‌ ಒಂದರ ಬಳಿ ಮಲಗಿದ್ದರು. ಬಾಲಕಿಯ ತಾಯಿಯು ರೈಸ್‌ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಎಲ್ಲ ಕಾರ್ಮಿಕರು ಮಿಲ್‌ ಬಳಿಯೇ ಮಲಗಿದ್ದರು. ಇದೇ ವೇಳೆ, ಕಾಮುಕ ಟ್ರಕ್‌ ಚಾಲಕನು ಯಾರಿಗೂ ಎಚ್ಚರವಾಗದಂತೆ ಬಾಲಕಿಯನ್ನು ಹೊತ್ತುಕೊಂಡು ಹೋಗಿದ್ದಾನೆ. ಬಾಲಕಿ ಕೂಡ ನಿದ್ದೆಯಲ್ಲಿದ್ದ ಕಾರಣ ಆಕೆ ಕಿರುಚಾಡಿಲ್ಲ. ಮೆಲ್ಲಗೆ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಹೊತ್ತುಕೊಂಡು ಹೋದ ಆತ ಅತ್ಯಾಚಾರ ಎಸಗಿದ್ದಾನೆ. ಇದಾದ ಬಳಿಕ ಬಾಲಕಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ.

ಮಧ್ಯರಾತ್ರಿ ಬಾಲಕಿಯ ತಾಯಿಗೆ ಎಚ್ಚರವಾಗಿದೆ. ಪಕ್ಕದಲ್ಲಿ ಮಲಗಿದ್ದ ಮಗಳು ಕಾಣಿಸದಿದ್ದಾಗ ಎಲ್ಲ ಕಾರ್ಮಿಕರನ್ನು ಎಬ್ಬಿಸಿದ್ದಾರೆ. ಕೂಡಲೇ ಎಲ್ಲ ಕಾರ್ಮಿಕರು ತಡ ರಾತ್ರಿಯೇ ಬಾಲಕಿಗಾಗಿ ಶೋಧ ನಡೆಸಿದ್ದಾರೆ. ಆಗ ನಿರ್ಜನ ಪ್ರದೇಶದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಇನ್ನಷ್ಟು ಕಾರ್ಮಿಕರು ಜತೆಗೂಡಿ ರಾತ್ರಿ ದುಷ್ಟನ ಶೋಧಕ್ಕಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಆಗ ಟ್ರಕ್‌ ಚಾಲಕನು ಕಾರ್ಮಿಕರ ಕೈಗೆ ಸಿಕ್ಕಿದ್ದಾನೆ. ಆತನಿಗೆ ಧರ್ಮದೇಟು ಕೊಟ್ಟ ಕಾರ್ಮಿಕರು, ಮನಸೋಇಚ್ಛೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಬಲರಾಮ್‌ ಬಾಲಕಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಲರಾಮ್‌ನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

RELATED ARTICLES
- Advertisment -
Google search engine

Most Popular