ಚಿಕ್ಕಬಳ್ಳಾಪುರ: ಡಾ. ಕೆ. ಸುಧಾಕರ್ ನನ್ನ ಸವಾಲು ಸ್ವೀಕರಿಸದ್ದಕ್ಕೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸ್ಪಷ್ಟಪಡಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಗೆದ್ದರೆ ತಾನು ರಾಜೀನಾಮೆ ನೀಡುತ್ತೇನೆ ಎಂದು ಸವಾಲೊಡ್ಡಿದ್ದ ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆ ನೀಡಬೇಕೆಂಬ ಬಿಜೆಪಿಗರ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು, ರಾಜೀನಾಮೆಗೆ ಆಗ್ರಹ ಮಾಡಿದ ವಿರೋಧ ಪಕ್ಷದವರಿಗೆ ಧನ್ಯವಾದಗಳು. ಸುಧಾಕರ್ ಅವರು ನನ್ನ ಸವಾಲು ಸ್ವೀಕರಿಸಿಲ್ಲ. ಅವರು ನನ್ನ ಸವಾಲು ಸ್ವೀಕರಿಸಿದ್ದರೆ ನಾನು ರಾಜೀನಾಮೆ ನೀಡುತ್ತಿದ್ದೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಹಣದ ಹೊಳೆ ಹರಿದಿದೆ. ನಾನು ರಾಜೀನಾಮೆ ಕೊಡಬಹುದು ಎಂದು ಬಿಜೆಪಿಯವರು ಕಾದಿದ್ದಾರೆ. ನಾನು ರಾಜೀನಾಮೆ ನೀಡಿದ್ದರೆ ನೆಮ್ಮದಿಯಾಗಿ ಇರಬಹುದು ಅಂದುಕೊಂಡಿದ್ದಾರೆ. ಆದರೆ ನಾನು ಆ ನೆಮ್ಮದಿ ಅವರಿಗೆ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಡಾ. ಕೆ. ಸುಧಾಕರ್‌ಗೆ ಒಂದು ಮತ ಹೆಚ್ಚು ಪಡೆದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಪ್ರದೀಪ್ ಈಶ್ವರ್ ಸವಾಲೊಡ್ಡಿದ್ದರು. ಆದರೆ ಸುಧಾಕರ್ 20 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಆ ನಂತರ ಪ್ರದೀಪ್ ಈಶ್ವರ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮುಖಂಡರು ಪಟ್ಟುಹಿಡಿದ್ದಾರೆ.