ಮಂಗಳೂರು: ರಾಮೇಶ್ವರ ಕೆಫೆ ಬಾಂಬರ್ ಪತ್ತೆಗೆ ವಿಹಿಂಪ ಸಾಥ್ ನೀಡಲಿದೆ. ರಾಜ್ಯದ ಎಲ್ಲಾ ಮದರಸಾ, ಮಸೀದಿಗಳಿಗೆ ದಾಳಿ ನಡೆಸಿದರೆ ಖಂಡಿತಾ ಆರೋಪಿ ಪತ್ತೆಯಾಗಬಹುದು ಎಂದು ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದ್ದಾರೆ.
ಆರೋಪಿ ಕೃತ್ಯ ಎಸಗಿದ ಬಳಿಕ ಮಸೀದಿಗೆ ಹೋಗಿ ನಮಾಜ್ ಮಾಡಿ ಬಟ್ಟೆ ಬದಲಾಯಿಸಿದ್ದು ಮಾಧ್ಯಮದಲ್ಲಿ ಬಿತ್ತರವಾಗಿದೆ. ಆದ್ದರಿಂದ ಎನ್‌ಐಎ ಅಧಿಕಾರಿಗಳು ರಾಜ್ಯದ ಎಲ್ಲಾ ಮದರಸಾ, ಮಸೀದಿಗಳಿಗೆ ದಾಳಿ ನಡೆಸಿ ತನಿಖೆ ಕೈಗೊಳ್ಳಲಿ. ಜೊತೆಗೆ ಆತ ಭಟ್ಕಳ ಹೋಗಿದ್ದಾನೆಂಬ ಮಾಹಿತಿಯಿದೆ. ಆದ್ದರಿಂದ ಭಟ್ಕಳದ ಎಲ್ಲಾ ಮದರಸಾ, ಮಸೀದಿಗಳಿಗೂ ದಾಳಿ ನಡೆಸಿದ್ದಲ್ಲಿ ಖಂಡಿತಾ ನೂರಕ್ಕೆ ನೂರು ಆತ ಪತ್ತೆಯಾಗುತ್ತಾನೆ ಎಂದಿದ್ದಾರೆ.
ಎನ್‌ಐಎ ಅಧಿಕಾರಿಗಳು ಆರೋಪಿಯ ಫೋಟೋ ರಿಲೀಸ್ ಮಾಡಿ ಬಹುಮಾನ ಘೋಷಿಸಿದ್ದಾರೆ. ಕೃತ್ಯದ ಬಳಿಕ ಆತ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸಿದ್ದು, ಅಲ್ಲಿಂದ ಮಸೀದಿಗೆ ಹೋಗಿ ನಮಾಜ್ ಮಾಡಿ ಬಟ್ಟೆ ಬದಲಾಯಿಸಿದ್ದು, ಬಳ್ಳಾರಿಯಲ್ಲಿ ಓಡಾಟ ನಡೆಸಿದ್ದು, ಕೊನೆಗೆ ಭಟ್ಕಳಕ್ಕೆ ಬಂದಿದ್ದಾನೆ ಎಂಬ ಮಾಹಿತಿಯನ್ನು ಎನ್‌ಐಎ ಕೊಟ್ಟಿದೆ. ಆದರೂ ಈವರೆಗೆ ಆತನ ಪತ್ತೆಯಾಗಿಲ್ಲ.
ಆದ್ದರಿಂದ ಆತನ ಪತ್ತೆಗೆ ಪೊಲೀಸ್ ಅಧಿಕಾರಿಗಳಿಗೆ, ಎನ್‌ಐಎ ಅಧಿಕಾರಿಗಳಿಗೆ ವಿಎಚ್ ಪಿ ಸಾಥ್ ನೀಡಲಿದೆ. ನಮ್ಮ ಅಧಿಕೃತ ಟ್ವಿಟ್ಟರ್, ಎಫ್ ಬಿ ಅಕೌಂಟ್ ನಲ್ಲಿ ಆತನ ಫೋಟೋಗಳನ್ನು ಶೇರ್ ಮಾಡಿದ್ದೇವೆ. ಈತ ಎಲ್ಲಿಯಾದರೂ ಆರೋಪಿಯನ್ನು ಹೋಲುವ ವ್ಯಕ್ತಿಗಳು ಕಂಡುಬಂದಲ್ಲಿ ಪೊಲೀಸ್ ಅಧಿಕಾರಿಗಳಿಗೆ, ಎನ್‌ಐಎ ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇವೆ ಎಂದು ಶರಣ್ ಪಂಪ್ ವೆಲ್ ಆಗ್ರಹಿಸಿದರು.