ದಾವಣಗೆರೆ-ಸೆಪ್ಟೆಂಬರ್,
ವಿದ್ಯಾರ್ಥಿಗಳು ಉದಾಸೀನತೆ ಬಿಟ್ಟು ನಿರ್ಲಕ್ಷ ತೊರೆದು ಕರ್ತವ್ಯ ಪ್ರಜ್ಞೆಯೊಂದಿಗೆ ಪರೀಕ್ಷೆ ಬರೆದರೆ ಉತ್ತಮ ಫಲಿತಾಂಶ ಮತ್ತು ಮುಂದಿನ ಸಾಧನೆಗೆ ಭದ್ರವಾದ ಬುನಾದಿ ಜೊತೆಗೆ ಕೆಲವು ಶಿಕ್ಷಕ ಶಿಕ್ಷಕಿಯರು ಕೇವಲ ವೇತನಕ್ಕೆ ಸೀಮಿತವಾಗದೆ ಬದ್ಧತೆಯಿಂದ ಮಕ್ಕಳಿಗೆ ಮುಂದಿನ ದಿವ್ಯ ಭವ್ಯ ಭವಿಷ್ಯಕ್ಕೆ ಮಾರ್ಗದರ್ಶನ ಮಾಡುವ ಅಗತ್ಯ ಇದೆ ಎಸ್ ಎಸ್ ಎಲ್ ಸಿ ಪರೀಕ್ಷೆ ಶಿಕ್ಷಣ ಮತ್ತು ಜೀವನದ ಒಂದು ತಿರುವು. ಉತ್ತಮ ಫಲಿತಾಂಶ ತಂದರೆ ಪೋಷಕರ ಅವರು ವ್ಯಾಸಂಗ ಮಾಡಿದ ಶಿಕ್ಷಣ ಸಂಸ್ಥೆಗಳ ಕನಸು ನನಸಾಗುತ್ತದೆ ಎಂದು ಮೈಸೂರು ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎಸ್.ಟಿ. ಜವರೇಗೌಡ ತಮ್ಮ ಅನಿಸಿಕೆ ಹಂಚಿಕೊಂಡರು ಮೈಸೂರಿನ ಕುವೆಂಪು ಟ್ರಸ್ಟ್ ಕನ್ನಡ ಭವನದಲ್ಲಿ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಮತ್ತು ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಇತ್ತೀಚಿಗೆ ನಡೆದ 2024-25ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ಉಚಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮೈಸೂರು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್‌ರವರು ಮಾತನಾಡಿ, ಶೈಕ್ಷಣಿಕ ಕಾಳಜಿಯ ಈ ಅಪರೂಪದ ಅಭೂತಪೂರ್ವ ಪರೀಕ್ಷೆ ಕುರಿತು ಮಕ್ಕಳಲ್ಲಿ ಅರಿವು ಜಾಗೃತಿ ಮೂಡಿಸುವ ದಾವಣಗೆರೆಯ ಕಲಾಕುಂಚದ ಈ ಕಾರ್ಯಕ್ರಮ ಶ್ಲಾಘನೀಯ ಎಂದರು. ಇತ್ತೀಚಿನ ಶಿಕ್ಷಣದಲ್ಲಿ ಹಳೇ ಕನ್ನಡ ಇತಿಹಾಸ ಪರಂಪರೆ ಮರೆಯಾಗುತ್ತಿರುವುದು ವಿಷಾದ ಸಂಗತಿ ಎಂದರು. ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್‌ಶೆಣೈಯವರು ಮಕ್ಕಳಿಗೆ ಪರೀಕ್ಷಾ ಪೂರ್ವ ಸಿದ್ಧತೆ ಕುರಿತು ಉಪನ್ಯಾಸ ನೀಡಿ ಉತ್ತಮ ಫಲಿತಾಂಶಕ್ಕೆ ಪ್ರತಿಜ್ಞಾವಿಧಿ ಬೋಧಿಸಿದರು. ಮುಖ್ಯ ಅತಿಥಿಗಳಾಗಿ ಮೈಸೂರು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷರಾದ ಡಾ. ಟಿ. ತ್ಯಾಗರಾಜು, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಮೈಸೂರು ಜಿಲ್ಲಾಧ್ಯಕ್ಷರಾದ ನಾಗರಾಜ ಬೈರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೈಸೂರಿನ ಗ್ರಾಮೀಣ ಪ್ರದೇಶ ಶಿಕ್ಷಣ ಸಂಸ್ಥೆಗಳ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ.ಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ ೧೨೫ಕ್ಕೆ ೧೨೫ ಪರಿಪೂರ್ಣ ಅಂಕ ಪಡೆದ ಮಕ್ಕಳಿಗೆ ಮುಕುಟದ ಮೇಲೆ ಕಿರೀಟವಿಟ್ಟು, ಪದಕ, ಅಭಿನಂದನಾ ಪತ್ರದೊಂದಿಗೆ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಜತೆಗೆ ಆಯಾ ಶಿಕ್ಷಣ ಸಂಸ್ಥೆಗಳ ಕನ್ನಡ ಶಿಕ್ಷಕ-ಶಿಕ್ಷಕಿಯರಿಗೆ ಸನ್ಮಾನಿಸಲಾಯಿತು. ಶಿಕ್ಷಕಿ ಶ್ರೀಮತಿ ಪದ್ಮಾರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ ಸಿ ಉಮೇಶ್ ಸ್ವಾಗತಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಕಲಾಕುಂಚ ಸಮಿತಿ ಸದಸ್ಯರಾದ ಶ್ರೀಮತಿ ಶಿಲ್ಪ ಉಮೇಶ್ ವಂದಿಸಿದರು.