ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ಸರಕಾರಿ ಜಾಗ ಹಾಗೂ ತಮ್ಮ ಕುಮ್ಕಿ ಜಾಗದಲ್ಲಿ ಕೃಷಿ ಮಾಡಿಕೊಂಡು ಹಕ್ಕುಪತ್ರಕ್ಕಾಗಿ ನಮೂನೆ 50, 53, 57 ರಲ್ಲಿ ಅರ್ಜಿ ಸಲ್ಲಿಸಿ ಹಕ್ಕು ಪತ್ರಕ್ಕಾಗಿ ಕಾಯುತ್ತಿರುವ ಸಾವಿರಾರು ಅರ್ಜಿಗಳನ್ನು ಯಾವುದೇ ಮುನ್ಸೂಚನೆ ನೀಡದೆ ತಿರಸ್ಕೃತಗೊಳಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವು ರೈತರಿಗೆ ಘೋರ ಅನ್ಯಾಯ ಮಾಡಿದೆ.
ರಾಜ್ಯದಲ್ಲಿ ಸಣ್ಣ ಸಣ್ಣ ರೈತರಗಳು ಸರ್ಕಾರಿ ಜಾಗದಲ್ಲಿ ತಮ್ಮ ಜೀವನೋಪಾಯಕ್ಕಾಗಿ ಕೃಷಿ ಮಾಡಿಕೊಂಡು ಹಕ್ಕು ಪತ್ರಕ್ಕಾಗಿ ಕಾಯುತ್ತಿರಬೇಕಾದರೆ, ಸರ್ಕಾರ ಏಕಾಏಕಿ ಅರ್ಜಿಗಳನ್ನು ಬಗರ್ ಹುಕುಂ ಸಮಿತಿಯ ಮುಂದೆ ಮಂಡನೆ ಮಾಡದೆ ತಿರಸ್ಕೃತಗೊಳಿಸಲು ಸಿದ್ಧತೆ ನಡೆಸುತ್ತಿದೆ. ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಒಟ್ಟು 9873 ಅರ್ಜಿಗಳನ್ನು ತಿರಸ್ಕೃತಗೊಳಿಸಿದೆ.
ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಡಜನರ ಸುಮಾರು 7909 ಬಿಪಿಎಲ್ ಪಡಿತರ ಚೀಟಿಯನ್ನು ಏಕಾಏಕಿ ರದ್ದು ಮಾಡಲು ಶಿಫಾರಸ್ಸು ಮಾಡಿರುವುದು ಅತ್ಯಂತ ಖಂಡನೀಯ, ಇದೊಂದು ಬಡಜನರ ವಿರೋಧಿ ಸರ್ಕಾರ, ಈ ಸರ್ಕಾರಕ್ಕೆ ಬಡಜನರ ಕಾಳಜಿ ಇಲ್ಲ ಎಂದು ಮತ್ತೆ ಮತ್ತೆ ಸಾಬೀತಾಗಿದೆ.
ಏಕನಿವೇಶನದ ತಾಂತ್ರಿಕ ಅನುಮೋದನೆಗೆ ಸಂಬಂಧಿಸಿ, ರಾಜ್ಯ ಸರ್ಕಾರ ಮಾಡಿದ ಅವಾಂತರದಿಂದ ಕಾರ್ಕಳದ ಜನರು ದೂರದ ಕಛೇರಿಗಳಿಗೆ ಅಲೆದಾಡುವ ಸ್ಥಿತಿ ಬಂದಿದೆ. ಈ ಹಿಂದೆ 2 ಸಾವಿರದಲ್ಲಿ ಆಗಬೇಕಿದ್ದ ಕೆಲಸಕ್ಕೆ 20 ಸಾವಿರ ವ್ಯಯಿಸುವ ಸ್ಥಿತಿ ಜನರದ್ದಾಗಿದೆ. ಈ ಎಲ್ಲಾ ವಿಚಾರಗಳು ಸೇರಿದಂತೆ ಇನ್ನೂ ಇದೇ ರೀತಿ ಅನೇಕ ಜನವಿರೋಧಿ ನೀತಿಗಳನ್ನು ಖಂಡಿಸಿ ನಾಳೆ ದಿನಾಂಕ 06.02.2025 ರಂದು ಬೆಳಿಗ್ಗೆ 10.00 ಗಂಟೆಗೆ ಸರಿಯಾಗಿ ಕಾರ್ಕಳ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷರಾದ ನವೀನ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.