ಗದಗ: ಆ ನದಿ ಜಿಲ್ಲೆಯ ಜೀವನಾಡಿ. ಆದರೆ ಅಕ್ರಮ ಮರಳು ದಂಧೆಕೋರರ ಅಟ್ಟಹಾಸಕ್ಕೆ ವಿಲವಿಲ ಅಂತಿದೆ. ಮರಳು ಕಳ್ಳರು ರಾತ್ರೋರಾತ್ರಿ ನದಿ ಒಡಲು ಬಗೆದು ಎಗ್ಗಿಲ್ಲದೇ ಮರಳು ಲೂಟಿ ನಡೆಸಿದ್ದಾರೆ. ಅಕ್ರಮ ಮರಳು ದಂಧೆಕೋರರು ರೈತರ ಜಮೀನುಗಳ ರಸ್ತೆ ಹಾಳು ಮಾಡುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿದ ರೈತನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಅಕ್ರಮ ಮರಳು ದಂಧೆ ನಡೆದರೂ ತಾಲೂಕಾಡಳಿತ ಏಕೆ ಮೌನವಾಗಿದೆ ಅಂತ ಸಾರ್ವಜನಿಕರು ಕಿಡಿಕಾರಿದ್ದಾರೆ.
ಜಿಲ್ಲೆಯ ಮುಂಡರಗಿ ತಾಲೂಕಿನ ಶೀರನಹಳ್ಳಿ ಗ್ರಾಮದಲ್ಲಿ ರೈತ ಕೋಟೆಪ್ಪ ಮಲ್ಲಾಪುರ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ದಂಧೆಕೋರರು ಎಸ್ಕೇಪ್ ಆಗಿದ್ದಾರೆ. ಶೀರನಹಳ್ಳಿ ಗ್ರಾಮದ ವ್ಯಾಪ್ತಿಯ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ನಡೆದಿದೆ. ಇದ್ರಿಂದ ರೈತರ ಜಮೀನುಗಳಲ್ಲಿ ಬೆಳೆ ಹಾಳಾಗುತ್ತಿದೆ. ಹೀಗಾಗಿ ರೈತರು ಅಕ್ರಮ ಮರಳು ದಂಧೆ ಮಾಡಿದವರನ್ನು ಪ್ರಶ್ನೆ ಮಾಡಿದ್ದಾರೆ. ಅದೇ ಗ್ರಾಮದ ಗುಡ್ಡದಯ್ಯ ಮಜ್ಜಗಿ ತನ್ನ ಗ್ಯಾಂಗ್ ಕರೆದುಕೊಂಡು ರೈತ ಕೋಟೆಪ್ಪ ಮಲ್ಲಾಪುರ ಮೇಲೆ ಅಟ್ಯಾಕ್ ಮಾಡಿದ್ದಾನೆ.
ರಾತ್ರೋರಾತ್ರಿ 15 ಜನರ ಗ್ಯಾಂಗ್ ಮಾರಕಾಸ್ತ್ಗಳಿಂದ ರೈತ ಕೋಟೆಪ್ಪನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಇದು ರೈತ ಸಮೂದಾಯವೇ ಬೆಚ್ಚಿಬಿಳಿಸಿದೆ. ಜಮೀನಿನಲ್ಲಿನ ಬೆಳೆ ಹಾನಿಯಾಗಿದ್ರಿಂದ ಕೋಟೆಪ್ಪ ಪೊಲೀಸರಿಗೆ ಮಾಹಿತಿ ನೀಡಿದ್ದಾರಂತೆ. ಹೀಗಾಗಿ ದಂಧೆಕೋರರು ಹಲ್ಲೆ ಮಾಡಿದ್ದಾರೆ ಅಂತ ರೈತ ಆಸ್ಪತ್ರೆಯಲ್ಲಿ ನರಳಾಡುತ್ತ ಗೋಳು ತೋಡಿಕೊಂಡಿದ್ದಾರೆ.
ಇನ್ನೂ ಮುಂಡರಗಿ ತಾಲೂಕಿನ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ನಡೆದಿದೆ. ನದಿ ತೀರದ ರೈತರು, ಗ್ರಾಮಸ್ಥರು ತಹಶೀಲ್ದಾರ, ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ರೂ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ಅಧಿಕಾರಿಗಳು ಅಕ್ರಮ ಮರಳು ದಂಧೆಕೋರರ ಜೊತೆ ಶಾಮೀಲಾಗಿದ್ದಾರೆ ಅಂತ ನದಿ ತೀರದ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಆಡಳಿತ ನಿರ್ಲಕ್ಷ್ಯ ತೋರಿದ್ದರಿಂದ ಕಳೆದ ವಾರದ ಹಿಂದೆ ಗದಗ ಡಿಸಿ ಸಿಎನ್ ಶ್ರೀಧರ್ ಸ್ವತಃ ನದಿಗೆ ಇಳಿದು ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಿದ್ದರು. ಈಗ ಮತ್ತೆ ದಂಧೆಕೋರರು ತಮ್ಮ ಅಟ್ಟಹಾಸ ಮೆರೆದಿದ್ದಾರೆ. ರಾತ್ರಿ ವೇಳೆ ಗುಡ್ಡದಯ್ಯ ಮತ್ತು ಗ್ಯಾಂಗ್ ಅಕ್ರಮ ಮರಳು ಲೂಟಿ ಮಾಡ್ತಾಯಿದೆ. ಜಮೀನು ರಸ್ತೆ ಹಾಳಾಗುತ್ತದೆ. ಈ ಹಿಂದೆ ಕೂಡ ಮುಂಡರಗಿ ಪೊಲೀಸರಿಗೆ ಅಕ್ರಮ ಮರಳು ದಂಧೆ ಕುರಿತು ದೂರು ನೀಡಲು ನೊಂದು ರೈತ ಕುಟುಂಬ ಹೋಗಿತ್ತು. ಈ ವೇಳೆಯಲ್ಲಿ ಪೊಲೀಸರು ಹಾಗೂ ಸ್ಥಳೀಯರು ರಾಜೀ ಸಂಧಾನ ಮಾಡಿ ಕಳುಹಿಸಿದರಂತೆ. ಈವಾಗ ಅಕ್ರಮವಾಗಿ ಮರಳು ಸಾಗಿಸುವಾಗ, ಕೋಟೆಪ್ಪ, ಕುಟುಂಬಸ್ಥರು ಈ ರಸ್ತೆಯಲ್ಲಿ ಹೋಗಬೇಕು ಎಂದಿದ್ದಾರೆ. ಹೀಗಾಗಿ ಅವರ ಕುಟುಂಬಸ್ಥರ ಜೊತೆಗೆ ಗಲಾಟೆ ಮಾಡಿದ್ದಾರೆ. ಗಲಾಟೆ ಬಿಡಿಸಲು ರೈತ ಕೋಟೆಪ್ಪ ಹೋದಾಗ, ಅವರನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಸದ್ಯ ನಮಗೆ ಸೂಕ್ತವಾದ ರಕ್ಷಣೆ ಬೇಕು ಎಂದು ಗಾಯಾಳು ಮಗ ಭೀಮಪ್ಪ ಒತ್ತಾಯಿಸಿದ್ದಾರೆ.
ಅಕ್ರಮವಾಗಿ ಮರಳು ದಂಧೆ ನಡೆದರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಗಪ್ ಚುಪ್ ಆಗಿದೆ. ದಂಧೆಕೋರರ ವಿರುದ್ಧ ಕಠಿಣ ಕಾನೂನು ಕ್ರಮ ಆಗಬೇಕು ಅಂತ ಹಲ್ಲೆಗೊಳಗಾದ ರೈತ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ. ರೈತನ ಮೇಲಿನ ಮಾರಣಾಂತಿಕ ಹಲ್ಲೆ ಈ ಭಾಗದ ರೈತರ ಆತಂಕಕ್ಕೆ ಕಾರಣವಾಗಿದೆ. ಈಗಲಾದ್ರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಅಕ್ರಮ ಮರಳು ದಂಧೆಕೋರರಿಗೆ ತಕ್ಕ ಶಿಕ್ಷೆ ನೀಡುವ ಮೂಲಕ ದಂಧೆಕೋರರಿಗೆ ಎಚ್ಚರಿಕೆ ನೀಡಬೇಕಿದೆ.
ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ನಡೆದಿದೆ. ಪ್ರಶ್ನೆ ಮಾಡಿದ್ರೆ ಸಾಕು ದಂಧೆಕೋರರು ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡುವ ಹಂತಕ್ಕೆ ಬಂದಿದ್ದಾರೆ. ಇದೀಗ ದಂಧೆಕೋರರ ಅಟ್ಟಹಾಸಕ್ಕೆ ಆಸ್ಪತ್ರೆಗೆ ದಾಖಲಾದ ರೈತರು ನರಳಾಡುತ್ತಿದ್ದಾರೆ. ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾಗಿ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.