ಮಂಗಳೂರು: ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು ಕರ್ನಾಟಕದ ಗಡಿಭಾಗದ ಜಿಲ್ಲೆಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ತಪಾಸಣೆ ಕೈಗೊಳ್ಳಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಜಾಲ್ಲೂರು, ಬಂಟ್ವಾಳದ ಸಾರಡ್ಕ ಉಳ್ಳಾಲದ ತಲಪಾಡಿ ಚೆಕ್ ಪೋಸ್ಟ್ ಗಳಲ್ಲಿ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು ತಪಾಸಣೆ ಕೈಗೊಂಡಿದ್ದಾರೆ. ಕರ್ನಾಟಕದ ಕೋಳಿ, ಕೋಳಿ ಮಾಂಸ, ಇತರ ಉತ್ಪನ್ನಗಳಿಗೆ ಕೇರಳವೇ ದೊಡ್ಡ ಮಾರುಕಟ್ಟೆ, ಕೇರಳದತ್ತ ತೆರಳಿ ಹಿಂದೆ ಬರುವ ವಾಹನಗಳನ್ನು ಗಡಿಭಾಗಗಳಲ್ಲಿ ಸ್ಯಾನಿಟೈಜ್ ಮಾಡಲಾಗುತ್ತದೆ. ವಾಹನಗಳನ್ನು ಗಡಿಭಾಗದಲ್ಲಿ ಸ್ಯಾನಿಟೈಜ್ ಮಾಡಿದ ನಂತರವೇ ಒಳಗೆ ಬಿಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಕ್ಕಿಗಳು ಅಥವಾ ಕೋಳಿಗಳು ಸಂಶಯಾಸ್ಪದ ಸಾವಿಗೀಡಾಗಿರುವುದು ಕಂಡುಬಂದರೆ ತಕ್ಷಣ ಇಲಾಖೆಯ ಗಮನಕ್ಕೆ ತರಬೇಕು. ಹಕ್ಕಿಜ್ವರ ತಡೆಯುವ ಕ್ರಮಗಳ ಬಗ್ಗೆ ಪಶುವೈದ್ಯರು ರೈತರಿಗೆ ಮಾಹಿತಿ ನೀಡಿದ್ದಾರೆ. ಕೋಳಿ ಸಾಕಣೆ ಕೇಂದ್ರ ಮತ್ತು ಮಾಂಸದ ಘಟಕಗಳಲ್ಲಿ ಕೆಲಸ ಮಾಡುವವರಿಗೆ ಹಕ್ಕಿಜ್ವರದ ಸೋಂಕು ತಗಲುವ ಸಾಧ್ಯತೆ ಹೆಚ್ಚು ಜಾಗೃತರಾಗಿರುವಂತೆ ತಿಳಿಸಿದ್ದೇವೆ. ದ.ಕ. ಜಿಲ್ಲೆಯಲ್ಲಿ ಇದುವರೆಗೆ ಹಕ್ಕಿಜ್ವರ ಕಂಡುಬಂದಿಲ್ಲ. ಹಕ್ಕಿಜ್ವರ ಇದ್ದರೂ ಕೋಳಿ ಮಾಂಸ ಸೇವನೆಯಿಂದ ಮನುಷ್ಯನಿಗೆ ರೋಗ ಹರಡುವುದಿಲ್ಲ. ಫಾರ್ಮ್ ಗಳಲ್ಲಿ ಕೋಳಿಯಿಂದ ಹರಡುವ ಸಾಧ್ಯತೆ ಇರುತ್ತದೆ. ಆದರೆ ಈ ಸೋಂಕು ಮನುಷ್ಯನಿಂದ ಮನುಷ್ಯನಿಗೆ ಹರಡುವುದಿಲ್ಲ. ಆದ್ದರಿಂದ ಯಾರೂ ಗಾಬರಿಪಡುವ ಅಗತ್ಯವಿಲ್ಲ ಎಂದು ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕ ಅರುಣ್ ಶೆಟ್ಟಿ ತಿಳಿಸಿದ್ದಾರೆ.