Monday, February 17, 2025
Homeಉಡುಪಿಗುಲ್ವಾಡಿ ಹಾಡಿದೈವದ ಮನೆಯ ಪರಿವಾರ ದೈವಗಳ ನೂತನ ಶಿಲಾಮಯ ಗುಡಿ ಉದ್ಘಾಟನೆ, ಬ್ರಹ್ಮಕಲಶಾಭಿಷೇಕ

ಗುಲ್ವಾಡಿ ಹಾಡಿದೈವದ ಮನೆಯ ಪರಿವಾರ ದೈವಗಳ ನೂತನ ಶಿಲಾಮಯ ಗುಡಿ ಉದ್ಘಾಟನೆ, ಬ್ರಹ್ಮಕಲಶಾಭಿಷೇಕ

ದೈವ ದೇವರ ಮೇಲೆ ಶೃದ್ಧಾನಂಬಿಕೆಗಳು ಗಟ್ಟಿಯಾಗಬೇಕಾದರೆ ಧಾರ್ಮಿಕ ಕೇಂದ್ರಗಳು ಅಭಿವೃದ್ಧಿ ಕಾಣಬೇಕು : ಸುಬ್ರಹ್ಮಣ್ಯ ಶ್ರೀ

ಉಡುಪಿ : ದೈವ ದೇವರ ಬಗ್ಗೆ ನಮ್ಮಲ್ಲಿ ಭಯಭಕ್ತಿಗಳು ತುಂಬಿರಬೇಕು. ಯಾರಿಗೂ ಕಾಣಿಸದಿರುವ ಹಾಗೆ ಅಪರಾಧಗಳನ್ನು ಮಾಡಿದರೂ ಅದು ದೈವದೇವರಿಗೆ ಮೋಸ ಮಾಡಲು ಸಾಧ್ಯವಿಲ್ಲ ಎಂಬ ಸತ್ಯ ಅರಿತಾಗ ಮಾನವ ನ್ಯಾಯ, ಧರ್ಮದ ದಾರಿಯಲ್ಲಿ ನಡೆಯುತ್ತಾನೆ. ದೈವದೇವರ ಭಯ ಸನ್ಮಾರ್ಗದಲ್ಲಿ ನಡೆಸಲು ಪ್ರೇರಣೆ ನೀಡುತ್ತದೆ. ನಮ್ಮ ಭಕ್ತಿ , ಶೃದ್ಧೆ, ನಂಬಿಕೆಗಳು ಗಟ್ಟಿಯಾಗಿ ಬೆಳೆಯಬೇಕಾದರೆ ಆ ಶೃದ್ಧಾ ಕೇಂದ್ರಗಳು ಚೆನ್ನಾಗಿ ಅಭಿವೃದ್ಧಿ ಹೊಂದಿರಬೇಕು ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥರು ಹೇಳಿದರು.

ಅವರು ಬುಧವಾರ ಕುಂದಾಪುರ ಗುಲ್ವಾಡಿ ಗ್ರಾಮದ ಹಾಡಿದೈವದ ಮನೆಯ ಶ್ರೀ ನಂದಿಕೇಶ್ವರ, ಚಿಕ್ಕಮ್ಮ, ಹೈಗುಳಿ, ಸಪರಿವಾರ ದೈವಗಳಿಗೆ ಅಷ್ಟೋತ್ತರ ಕಲಶ ಸಹಿತ ಬ್ರಹ್ಮ ಕಲಶಾಭಿಷೇಕ ಹಾಗೂ ನೂತನ ಶಿಲಾಮಯ ದೈವಸ್ಥಾನದ ಉದ್ಘಾಟನೆ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮಾನವನ ಜೀವನ ಧರ್ಮ, ನಂಬಿಕೆಯ ಆಧಾರದ ಮೇಲೆ ನಿಂತಿದೆ. ಮಹಾಭಾರತ ಧರ್ಮೋ ರಕ್ಷತಿ ರಕ್ಷಿತ: ಎಂದು ಹೇಳುತ್ತದೆ. ಮಾನವ ತನ್ನ ಸಂಸ್ಕಾರ, ಧರ್ಮದಿಂದ ಚೆನ್ನಾಗಿ ಬದುಕಬೇಕು ಎಂಬುದು ನಿಜ. ಆದರೆ ನಾವು ಯಾವಾಗಲೂ ಸುಖದಿಂದ ಇರಲು ಸಾಧ್ಯವೇ ? ನಮಗೆ ಕಷ್ಟಗಳು ಬಂದಾಗ ಅವುಗಳ ಪರಿಹಾರಕ್ಕೆ ನಾವು ಮೊರೆ ಹೋಗುವುದು ದೈವ-ದೇವರಿಗೆ. ಸಮಗ್ರ ಸಮಾಜ ಚೆನ್ನಾಗಿ ಬದುಕಬೇಕು ಎಂಬುದು ಸೃಷ್ಟಿ ಕರ್ತನ ಸದಾಶಯ ಎಂದು ಅವರು ತಿಳಿಸಿದರು.

ಯಾರೂ ಬಲಾಢ್ಯರಾದ ಕುದುರೆ, ಆನೆ, ಹುಲಿಯನ್ನು ಎಂದೂ ಬಲಿಕೊಡಲಾರ. ಬದಲಿಗೆ ದುರ್ಬಲ ಪ್ರಾಣಿ ಆಡನ್ನು ಬಲಿ ಕೊಡುತ್ತಾನೆ. ಇದೇ ರೀತಿ ಮಾನವನಲ್ಲಿ ಇತರರನ್ನು ತುಳಿದಾದರೂ ತಾನು ಚೆನ್ನಾಗಿ ಬದುಕಬೇಕು ಎಂಬ ಸ್ವಾರ್ಥ ಇದ್ದೇ ಇರುತ್ತದೆ. ಹೀಗಾದರೆ ಸಮಾಜದಲ್ಲಿ ಶಾಂತಿ, ನೆಮ್ಮದಿ ಇರಲು ಸಾಧ್ಯವೇ ? ಮಾನವನ ಜೀವಿತಗೋಸ್ಕರವೇ ಧರ್ಮದ ಆವಿರ್ಭಾವವಾಗಿದೆ. ನಾವು ಚೆನ್ನಾಗಿರಬೇಕು ಎಂಬುದಾದರೆ ಎಂದೂ ಅಪರಾಧಗಳನ್ನು ಮಾಡಬಾರದು ಎಂದ ಶ್ರೀಗಳು, ನಮ್ಮ ಹಿರಿಯರು ಕಲ್ಲು, ಮರದ ತುಂಡುಗಳನ್ನೇ ದೈವ, ದೇವರೆಂದು ಪೂಜಿಸಿದ್ದರು. ಆದರೆ ಇಂದಿನ ಯುವ ಜನಾಂಗ ಇಂತಹ ಆಚರಣೆಗಳನ್ನು ಪ್ರಶ್ನೆ ಮಾಡದೆ ಇರದು. ಹೀಗಾಗಿ ದೈವ, ದೇವರ ಆರಾಧನಾ ಸ್ಥಳಗಳನ್ನು ಕಾಲಕ್ಕೆ ತಕ್ಕಂತೆ ಜೀರ್ಣೋದ್ಧಾರ ಮಾಡಿಕೊಂಡು ಆರಾಧಿಸಿಕೊಂಡು ಹೊರಟಾಗ ಮಾತ್ರ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ. ನಮ್ಮ ಶೃದ್ಧೆ ಆಚರಣೆಗಳನ್ನು ಮುಂದಿನ ಪೀಳಿಗೆಗೆ ದಾಟಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಕರಾವಳಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಪ್ರಾಚೀನ ದೈವದೇವಳಗಳು ಇಂದು ಜೀರ್ಣೋದ್ಧಾರ ಕಂಡಿವೆ. ಈ ಹಾಡಿಮನೆ ಕ್ಷೇತ್ರ ಕೂಡಾ ಚೆನ್ನಾಗಿ ಅಭಿವೃದ್ಧಿ ಕಂಡಿದೆ. ಈ ಊರಿನವರೇ ಆಗಿರುವ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿರುವ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಈ ಶೃದ್ಧಾ ಕೇಂದ್ರ ಬಗ್ಗೆ ಮಾಹಿತಿಯನ್ನು ಚೆನ್ನಾಗಿ ನೀಡಿದ್ದಾರೆ. ಅವರಂತಹ ಹಿರಿಯರ ಮಾರ್ಗದರ್ಶನದಲ್ಲಿ ಈ ಕ್ಷೇತ್ರ ಇನ್ನಷ್ಟು ಬೆಳಗಲಿ ಎಂದು ಸ್ವಾಮೀಜಿ ಹಾರೈಸಿದರು.

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, ಬಾಲ್ಯದಲ್ಲಿ ತಂದೆ ತಾಯಿ ಜೊತೆಗೆ ಈ ಹಾಡಿಮನೆ ದೇವಳಕ್ಕೆ ಬಂದು ಆರಾಧಿಸುತ್ತಿದ್ದೆವು. ಜೀರ್ಣಾವಸ್ಥೆಯಲ್ಲಿದ್ದ ಇಲ್ಲಿನ ಗುಡಿಗಳೆಲ್ಲಾ ಜೀರ್ಣೋದ್ಧಾರಗೊಂಡು ಪರಿಪೂರ್ಣತೆ ಪಡೆದಿವೆ. ದೈವದೇವರ ಸಾನಿಧ್ಯ ವೃದ್ಧಿಯಾಗಿದೆ. ಈ ಮೂಲಕ ಜನರನ್ನು ಒಗ್ಗೂಡಿಸುವ ಕಾರ್ಯವೂ ನಡೆದಿದೆ.
ಭಗವಂತನ ಆರಾಧನೆ, ಸ್ಮರಣೆಯಿಂದ ನಮಗೆ ರಕ್ಷಣೆ ಸಿಗುತ್ತದೆ. ಭಗವಂತ ನಂಬಿದವರ ಕೈ ಬಿಡಲಾರ ಎಂಬುದಕ್ಕೆ ನೂರಾರು ಉದಾಹರಣೆಗಳಿವೆ. ತುಳುನಾಡಿನಲ್ಲಿ ದೈವಾರಾಧನೆ ಪ್ರಾಮುಖ್ಯತೆ ಪಡೆದಿದೆ. ದೈವ-ದೇವರು ಜೊತೆಯಾಗಿ ಆರಾಧಿಸಲ್ಪಡುತ್ತಿರುವ ಪುಣ್ಯ ಕ್ಷೇತ್ರವಿದು ಎಂದರು. ನಮ್ಮ ಹಿರಿಯರು ಈ ದೈವದೇವರ ಆರಾಧನೆಯ ಹೆಸರಿನಲ್ಲಿ ಅನೇಕ ಜಾನಪದ ಕಲೆಗಳನ್ನು ಬೆಳೆಸಿಕೊಂಡು ಬಂದರು. ಈ ಆಚರಣೆಯ ಭಾಗವಾಗಿರುವ ಯಕ್ಷಗಾನ ಇದಕ್ಕೆ ಉದಾಹರಣೆಯಾಗಿದೆ. ನಮ್ಮೆಲ್ಲಾ ಯಕ್ಷಗಾನ ಮೇಳಗಳು ಇಂತಹ ಕಾರಣಿಕ ಕ್ಷೇತ್ರದ ಹೆಸರಿನಲ್ಲಿ, ದೈವ ದೇವರ ಹೆಸರಿನಲ್ಲಿ ಪ್ರಾರಂಭಗೊoಡು ಮೆರೆಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ನಂಬಿದವರಿಗೆ ಇಂಬು ಕೊಡುವ ಈ ಶಕ್ತಿಪೀಠಗಳ ಕೃಪೆ ನಮ್ಮೆಲ್ಲರ ಮೇಲಿರಲಿ ಎಂದು ಅವರು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಲ್ವಾಡಿ ದೊಡ್ಮನೆಯ ನಾಗರಾಜ ಶೆಟ್ಟಿ ವಹಿಸಿದ್ದರು. ವಿದ್ವಾನ್ ಮಾಧವ ಅಡಿಗ ಬಳ್ಕೂರು ಧಾರ್ಮಿಕ ಪ್ರವಚನ ನೀಡಿದರು.

ಈ ಸಂದರ್ಭದಲ್ಲಿ ಅರೆಕಲ್ಲು ಮಠದ ನರಸಿಂಹಮೂರ್ತಿ ಉಪಾಧ್ಯಾಯ, ಗುಲ್ವಾಡಿ ದೊಡ್ಮನೆಯ ಸುಧಾಕರ ಶೆಟ್ಟಿ, ಭಾಸ್ಕರ ಶೆಟ್ಟಿ, ಜಿ.ರವೀಂದ್ರನಾಥ ಶೆಟ್ಟಿ, ಹಟ್ಟಿಯಂಗಡಿ ಲೋಕನಾಥೇಶ್ವರ ದೇಗುಲದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಬ್ಲಾಡಿ ಪಟೇಲರ ಮನೆಯ ಕರುಣಾಕರ ಶೆಟ್ಟಿ, ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.
ಶಿಲಾಮಯ ದೇಗುಲದ ನಿರ್ಮಾಣ ಕಾರ್ಯಕ್ಕೆ ಸಹಕರಿಸಿದವರಿಗೆ ಗೌರವಾರ್ಪಣೆ ನಡೆಯಿತು,
ದೊಡ್ಮನೆ ಪ್ರದೀಪ್ ಶೆಟ್ಟಿ ಸ್ವಾಗತಿಸಿದರು. ಶಿವರಂಜನ್ ಶೆಟ್ಟಿ ವಂದಿಸಿದರು. ಉಪನ್ಯಾಸಕ ಅಕ್ಷಯ ಹೆಗ್ಡೆ ನಿರೂಪಿಸಿದರು.

ಅರೆಕಲ್ಲು ವೇ.ಮೂ. ಶ್ರೀನಿವಾಸ ಉಪಾಧ್ಯಾಯರ ನೇತೃತ್ವದಲ್ಲಿ ನಾಗದೇವರ ಪುನರ್ ಪ್ರತಿಷ್ಠೆ, ಸಪರಿವಾರ ನಂದಿಕೇಶ್ವರ, ಚಿಕ್ಕಮ್ಮ, ದೈವಗಳ ಪ್ರತಿಷ್ಠಾಪನೆ , ಬ್ರಹ್ಮಕಲಶಾಭಿಷೇಕ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನಡೆದವು.

RELATED ARTICLES
- Advertisment -
Google search engine

Most Popular