ಕೆರೆಬೆಟ್ಟು : ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆರೆಬೆಟ್ಟುವಿನಲ್ಲಿ “ಪರಿಸರದ ಕಡೆ ನಮ್ಮ ನಡೆ’ ಸರಣಿ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಶಾಲಾ ಹಳೆ ವಿದ್ಯಾರ್ಥಿ, ಕೃಷಿ ವಿಜ್ಞಾನಿ ಡಾ. ರಾಘವೇಂದ್ರ ರಾವ್ ಪಾಂಡುಕಲ್ಲು ಇವರು ವಿದೇಶಿ ಹಣ್ಣಿನ ಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಚಿಕ್ಕ ಮಕ್ಕಳಲ್ಲಿ ಪರಿಸರದ ಬಗ್ಗೆ ಪ್ರೀತಿಯ ಜೊತೆಗೆ ಕಾಳಜಿ ಹಾಗೂ ಪರಿಸರ ಸಂರಕ್ಷಣೆ, ಪರಿಸರ ಹಾಗೂ ಪರಿಸರದ ಜೀವಿಗಳ ಉಳಿವಿಗಾಗಿ ಮಕ್ಕಳು ಮಾಡಬಹುದಾದ ಪ್ರಯತ್ನಗಳ ಆಶಯದ ಉದ್ದೇಶವನ್ನು ಇಟ್ಟುಕೊಂಡ ಸರಣಿ ಕಾರ್ಯಕ್ರಮದ ರೂವಾರಿಗಳಾದ ಡಾ. ರಾಘವೇಂದ್ರ ರಾವ್ ಮೊದಲ ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳಿಗೆ ಉಪಯುಕ್ತ ಮಾಹಿತಿ ನೀಡಿದರು. ಹಣ್ಣಿನ ತೋಟದ ಬೆಳವಣಿಗೆಯ ಜೊತೆಗೆ ಸ್ಥಳೀಯ ಪಕ್ಷಿಗಳನ್ನು ಸೆಳೆಯುವ ಪ್ರಯತ್ನ ಈ ಕಾರ್ಯಕ್ರಮದ ಹಿಂದಿದೆ.
ಇತ್ತೀಚೆಗೆ ಸ್ವಾತಂತ್ರ್ಯ ದಿನಾಚರಣೆಯಂದು ನಡೆದ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನದ ಅವಲೋಕನ ಕಾರ್ಯಕ್ರಮವೂ ಇಂದು ನಡೆಯಿತು. ಯಕ್ಷಗಾನ ಗುರುಗಳಾದ ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ಈ ಕಾರ್ಯಕ್ರಮ ನಡೆಸಿಕೊಟ್ಟರು. ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸಿದ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳ ಪೋಷಕರು ಮೆಚ್ಚುಗೆಯ ಅಭಿಪ್ರಾಯಗಳನ್ನು ವ್ಯಕಪಡಿಸಿದರು. ಯಕ್ಷಗಾನ ಅನ್ನುವುದು ಸಾಗರವಿದ್ದಂತೆ, ಕಲಿತಿರುವುದು ಅಲ್ಪ, ಮುಂದೆ ಕಲಿಯಲಿರುವುದು ಸಾಕಷ್ಟಿದೆ. ನಮ್ಮ ಪ್ರಯತ್ನ ನಿರಂತರವಾಗಿದ್ದಲ್ಲಿ ಕಲಿಕೆ ಸುಲಭ ಎಂಬ ಕಿವಿ ಮಾತನ್ನು ಯಕ್ಷಗಾನ ಗುರುಗಳಾದ ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಮಾಲತಿ ಗಣೇಶ್, ಉಪಾಧ್ಯಕ್ಷರಾದ ಶ್ರೀ ವಿಠಲ ಸೇರಿಗಾರ್, ಮುಖ್ಯ ಶಿಕ್ಷಕಿಯಾಗಿರುವ ಶ್ರೀಮತಿ ವಿನಂತಿನಿ ಆಚಾರ್ಯ, ಎಸ್.ಡಿ. ಎಮ್.ಸಿ ಸದಸ್ಯರು, ಪೋಷಕರು, ಶಿಕ್ಷಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿಯಾಗಿರುವ ಶ್ರೀಮತಿ ವಿನಂತಿನಿ ಆಚಾರ್ಯ ಸ್ವಾಗತಿಸಿ, ಸಹ ಶಿಕ್ಷಕರಾದ ಶ್ರೀ ರಕ್ಷಿತ್ ನಾಯ್ಕ್ ನಿರೂಪಿಸಿ, ಧನ್ಯವಾದವಿತ್ತರು.