ಕಾಸರಗೋಡು : ಇಲ್ಲಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಮತ್ತು ಗ್ರಂಥಾಲಯದ ಕೊಡಗು ಜಿಲ್ಲಾ ಘಟಕ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕವನ್ನು ಮಡಿಕೇರಿಯ ಪತ್ರಿಕಾ ಭವನದಲ್ಲಿ ಕಾಸರಗೋಡಿನ ಕನ್ನಡ ಭವನದ ಸ್ಥಾಪಕಾಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಭಾನುವಾರ(ಮಾ.23) ಸಂಜೆ ಉದ್ಘಾಟಿಸಿದರು.
ಸಭೆಯ ಅಧ್ಯಕ್ಷತೆಯನ್ನು ಕನ್ನಡ ಭವನದ ಕೊಡಗು ಜಿಲ್ಲಾಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಾನಪದ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಬಿ ಬಿ ಅನಂತಶಯನ, ಹಿರಿಯ ಸಾಹಿತಿ ಬಾರದ್ವಾಜ ಕೆ ಆನಂದತೀರ್ಥ, ಪ್ರಾಂಶುಪಾಲ ರಾಜೇಶ್ಚಂದ್ರ ಕೆ ಪಿ ಮುಖ್ಯ ಅತಿಥಿಗಳಾಗಿದ್ಧರು. ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ, ಸಾಹಿತಿ ವಿರಾಜ್ ಅಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಜ್ಜಿಕುಟ್ಟೀರ ಭವ್ಯ ಬೋಪಣ್ಣ ಅವರ ‘ದೇವ ನೇರ ಬೀರ್ಯ’ ಹಾಗೂ ತೆನ್ನೀರಾ ಟೀನಾ ಚಂಗಪ್ಪ ಅವರ ‘ಮನದಾಳದ ಹೆಜ್ಜೆ’ ಕೃತಿಗಳು ಬಿಡುಗಡೆಯಾದುವು. ಸಾಧಕರಿಗೆ 2025ರ ಸಾಲಿನ ಕನ್ನಡ ಪಯಸ್ವಿನಿ ಪ್ರಶಸ್ತಿ, ಭರವಸೆಯ ಬೆಳಕು ಪ್ರಶಸ್ತಿ ಹಾಗೂ ಕೊಡಗು ಜಿಲ್ಲಾ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ನಾಟಕ ಭಾರ್ಗವ ಕೆಂಪರಾಜು ಅವರನ್ನು ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಮೈಸೂರು ಜಿಲ್ಲಾ ಸಂಚಾಲಕರನ್ನಾಗಿ ನೇಮಿಸಲಾಯಿತು.
ಹಾಸನ ಜಿಲ್ಲೆಯ ಕನ್ನಡ ಭವನದ ಅಧ್ಯಕ್ಷರಾಗಿ ಡಾ. ಬಿ ಹೇಮಂತ್ ಕುಮಾರ್ ಆಯ್ಕೆಯಾದರು. ಕೊಡಗು ಜಿಲ್ಲಾ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ರುಬೀನಾ ಎಂ ಎ ಸ್ವಾಗತಿಸಿದರು. ರಂಜಿತ್ ಜಯರಾಂ ಪ್ರಾರ್ಥಿಸಿದರು. ಚಂದನ್ ನಂದರಬೆಟ್ಟು ವಂದಿಸಿದರು. ಹರ್ಷಿತಾ ಶೆಟ್ಟಿ ಮನವಳಿಕೆಗುತ್ತು ನಿರೂಪಿಸಿದರು. ನಂತರ ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರ ಅಧ್ಯಕ್ಷತೆಯಲ್ಲಿ ಚುಟುಕು ಕವಿಗೋಷ್ಠಿ ನಡೆಯಿತು. ಕೊಡಗು ಜಿಲ್ಲೆಯ ಸುಮಾರು 35 ಮಂದಿ ಕವಿಗಳು ಭಾಗವಹಿಸಿದ್ದರು.