ಪುತ್ತೂರು: ಕಳೆದ ಕೆಲವು ದಿನಗಳಿಂದ ಏರುಮುಖದತ್ತ ಸಾಗಿದ್ದ ಅಡಿಕೆ ಮಾರುಕಟ್ಟೆ ಧಾರಣೆ ಇನ್ನೂ ಕೆಲವು ದಿನ ಏರುಗತಿಯಲ್ಲಿ ಸಾಗುವ ನಿರೀಕ್ಷೆಯಿದೆ. ಚುನಾವಣೆ ಘೋಷಣೆಯ ನಂತರ ಏರುಗತಿಯಲ್ಲಿ ಸಾಗಿದ್ದ ಕೆಂಪಡಿಕೆ ಧಾರಣೆ, ಚುನಾವಣೆಯ ನಂತರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಚಾಲಿ ಅಡಿಕೆಗೂ ಸಾಕಷ್ಟು ಬೇಡಿಕೆ ಮುಂದುವರಿದಿದೆ. ಚುನಾವಣೆ ಘೋಷಣೆಗೂ ಮೊದಲು ಫೆಬ್ರವರಿಯಲ್ಲಿ ಕ್ಯಾಂಪ್ಕೊ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿ.ಗೆ 325ರಿಂದ 340 ರೂ., ಹಳೆ ಅಡಿಕೆ ಸಿ 400ರಿಂದ 410 ರೂ., ಹಳೆ ಅಡಿಕೆ ಡಿ 425ರಿಂದ 435 ರೂ. ಇತ್ತು. ಆ ನಂತರ ಅಡಿಕೆ ಧಾರಣೆ ಏರುಮುಖದತ್ತ ಸಾಗಿತ್ತು. ಏಪ್ರಿಲ್ ಎರಡನೇ ವಾರದಲ್ಲಿ ಹೊಸ ಅಡಿಕೆ ಕೆ.ಜಿ.ಗೆಎ 350-365 ರೂ., ಸಿಂಗಲ್ ಚೋಲ್ 420-435 ರೂ., ಡಬ್ಬಲ್ ಚೋಲ್ 435-450 ರೂ. ತನಕ ದಾಖಲಾಗಿದೆ. ಅಂದರೆ ಹೊಸ ಅಡಿಕೆ ಕೆ.ಜಿ.ಗೆ 25 ರೂ., ಸಿಂಗಲ್ ಚೋಲ್ 25 ರೂ., ಡಬ್ಬಲ್ ಚೋಲ್ 15 ರೂ. ಹೆಚ್ಚಳ ಕಂಡಿದೆ. ಶಿವಮೊಗ್ಗ, ಚನ್ನಗಿರಿ, ಚಿತ್ರದುರ್ಗ, ತೀರ್ಥಹಳ್ಳಿಯಲ್ಲೂ ಅಡಿಕೆ ಧಾರಣೆ ಏರಿಕೆ ಕಂಡಿದೆ. ಮಂಗಳೂರರು ಚಾಲಿ ಅಡಿಕೆ ಮಾರುಕಟ್ಟೆಯೂ 15 ದಿನಗಳಿಂದ ಸ್ಥಿರವಾಗಿದೆ. ಚುನಾವಣೆ ಮುಗಿದ ಬಳಿಕ ನಗದು ವ್ಯವಹಾರ ಹೆಚ್ಚಾಗುವ ಕಾರಣ ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಳವಾಗಲಿದೆ. ಅಡಿಕೆಗೂ ಬೇಡಿಕೆ ಇರುವುದರಿಂದ ಸಹಜವಾಗಿ ಧಾರಣೆ ಏರಿಕೆಯಾಗಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.