ಕಾಶ್ಮೀರ: ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ನಡೆಸಿದ ನಂತರ ಭಾರತದ ಸೇನೆ ಮಹತ್ವದ ಕಾರ್ಯಚರಣೆಯನ್ನು ನಡೆಸುತ್ತಿದೆ. ಮೋದಿ ಸರ್ಕಾರ ಈ ಘಟನೆ ನಂತರ ಸೇನೆಗೆ ಮುಕ್ತವಾಗಿ ಕೆಲಸ ಮಾಡುವಂತೆ ಅವಕಾಶವನ್ನು ನೀಡಿದೆ. ಇದೀಗ ಭಾರತದ ಸೇನೆ ಪಾಕ್ ಉಗ್ರರಿಗೆ ಒಂದರಂತೆ ಹೊಡೆತವನ್ನು ನೀಡುತ್ತಿದೆ. ಬಹುದೊಡ್ಡ ಕಾರ್ಯಚರಣೆಯನ್ನು ಸೇನೆ ಮಾಡುತ್ತಿದೆ. ಉಗ್ರರರು ನೆಲೆಸಿರುವ ಪ್ರದೇಶಕ್ಕೆ ನುಗ್ಗಿ ಭಾರತೀಯ ಸೇನೆ ಹೊಡೆಯುತ್ತಿದೆ. ನಿನ್ನೆ (ಏ.25) ಪಹಲ್ಗಾಮ್ ಶಂಕಿತ ದಾಳಿಕೋರ ಆಸಿಫ್ ಶೇಖ್ ಮನೆ ನಾಶವಾಗಿದೆ. ಇದೀಗ ಜಮ್ಮು ಮತ್ತು ಕಾಶ್ಮೀರದಾದ್ಯಂತ ಲಷ್ಕರ್-ಎ-ತೈಬಾ (ಎಲ್‌ಇಟಿ) ಕಮಾಂಡರ್ ಸೇರಿದಂತೆ ಐದು ಭಯೋತ್ಪಾದಕರ ಮನೆಗಳನ್ನು ನಾಶಪಡಿಸಲಾಗಿದೆ.
ಶೋಪಿಯಾನ್, ಕುಲ್ಗಾಮ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಎಲ್‌ಇಟಿ ಉಗ್ರರ ಮತ್ತು ದಾಳಿಗೆ ಸಂಬಂಧಿಸಿದ ಶಂಕಿತರ ವಿರುದ್ಧ ಕಾರ್ಯಾಚರಣೆಯನ್ನು ನಡೆಸಿದೆ. ಶೋಪಿಯಾನ್‌ನ ಚೋಟಿಪೋರಾ ಗ್ರಾಮದಲ್ಲಿ, ಎಲ್‌ಇಟಿ ಕಮಾಂಡರ್ ಶಾಹಿದ್ ಅಹ್ಮದ್ ಕುಟ್ಟೆ ಉಗ್ರನ ಮನೆಯನ್ನು ನೆಲಸಮಗೊಳಿಸಲಾಗಿದೆ. ಈತ ಕಳೆದ ಮೂರ್ನಾಲ್ಕು ವರ್ಷಗಳಿಂದ ಭಯೋತ್ಪಾದನಾ ಸಂಬಂಧಿತ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದಾನೆ ಮತ್ತುದೇಶ ವಿರೋಧಿ ಕಾರ್ಯಾಚರಣೆಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಎಂದು ಹೇಳಲಾಗಿದೆ. ಕುಲ್ಗಾಮ್‌ನ ಮಾತಲಂ ಪ್ರದೇಶದಲ್ಲಿ ಸಕ್ರಿಯ ಭಯೋತ್ಪಾದಕ ಜಾಹಿದ್ ಅಹ್ಮದ್‌ನ ಮತ್ತೊಂದು ಮನೆಯನ್ನು ಕೆಡವಲಾಯಿತು.
ಪುಲ್ವಾಮಾದ ಮುರ್ರಾನ್ ಪ್ರದೇಶದಲ್ಲಿ, ಭಯೋತ್ಪಾದಕ ಅಹ್ಸಾನ್ ಉಲ್ ಹಕ್ನ ಮನೆ ಸ್ಫೋಟಿಸಿ ನೆಲಸಮ ಮಾಡಲಾಗಿದೆ. 2018 ರಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದಕ ತರಬೇತಿ ಪಡೆದು, ಇತ್ತೀಚೆಗೆ ಕಣಿವೆಗೆ ಮತ್ತೆ ಪ್ರವೇಶಿಸಿದ್ದ ಎಂದು ಹೇಳಲಾಗಿದೆ. ಜೂನ್ 2023 ರಿಂದ ಸಕ್ರಿಯವಾಗಿರುವ ಎಲ್‌ಇಟಿ ಭಯೋತ್ಪಾದಕ ಎಹ್ಸಾನ್ ಅಹ್ಮದ್ ಶೇಖ್ನ ಮತ್ತೊಂದು ಎರಡಂತಸ್ತಿನ ಮನೆಯನ್ನು ಕೆಡವಲಾಗಿದೆ. ಐದನೇ ಭಯೋತ್ಪಾದಕ ಹರಿಸ್ ಅಹ್ಮದ್‌ನ ಪುಲ್ವಾಮಾದ ಕಚಿಪೋರಾ ಪ್ರದೇಶದಲ್ಲಿರುವ ಮನೆಯನ್ನು ಕೂಡ ಸ್ಫೋಟ ಮಾಡಲಾಗಿದೆ. ಈ ಎಲ್ಲ ಭಯೋತ್ಪಾದಕರನ್ನು ವಾಂಟೆಡ್ ಲಿಸ್ಟ್ಗೆ ಸೇರಿಸಲಾಗಿದೆ.
ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ ಶಂಕಿತ ಥೋಕರ್ ಮತ್ತು ಇತರ ಇಬ್ಬರು ಭಯೋತ್ಪಾದಕರ ರೇಖಾಚಿತ್ರಗಳನ್ನು ಅನಂತ್‌ನಾಗ್ ಪೊಲೀಸರು ಗುರುವಾರ ಬಿಡುಗಡೆ ಮಾಡಿದ್ದರು . ಇತರ ಇಬ್ಬರು ಶಂಕಿತರಾದ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ ಮತ್ತು ಅಲಿ ಭಾಯ್ ಅಲಿಯಾಸ್ ತಲ್ಹಾ ಭಾಯ್ ಪಾಕಿಸ್ತಾನಿ ಪ್ರಜೆಗಳಾಗಿದ್ದು, ಅವರ ಬಗ್ಗೆ ಮಾಹಿತಿ ನೀಡಿದವರಿಗೆ 20 ಲಕ್ಷ ರೂ. ಬಹುಮಾನ ನೀಡುವುದಾಗಿ ಅಧಿಕಾರಿಗಳು ಘೋಷಿಸಿದ್ದಾರೆ. ಸೇನೆ, ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈ ಪ್ರದೇಶದಲ್ಲಿ ಇವರ ಹುಡುಕಾಟಕ್ಕೆ ಕಾರ್ಯಚರಣೆ ನಡೆಸಿದ್ದಾರೆ.