ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲೂಕು ಪರಸನಟ್ಟಿ ಗ್ರಾಮದ ಕೆರೆಗೆ ಹಾರಿ ಭಾರತೀಯ ಸೇನೆ ಯೋಧ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಕಿತ್ತೂರು ತಾಲ್ಲೂಕಿನ ದೇಗಾಂವ ಗ್ರಾಮದ ಯೋಧ ನರೇಶ ಯಲ್ಲಪ್ಪ ಆಗಸರ (28) ಮೃತ ಯೋಧನಾಗಿದ್ದು, ಪರಸನಟ್ಟಿ ಗ್ರಾಮದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಐದು ವರ್ಷಗಳಿಂದ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಕಳೆದ 20 ದಿನಗಳ ಹಿಂದೆ ರಜೆ ಮೇಲೆ ದೇಗಾಂವ ಗ್ರಾಮಕ್ಕೆ ಬಂದಿದ್ದರು. ರಜೆ ಮುಗಿಸಿ ನವೆಂಬರ್ 24ರಂದು ಸೇನಾ ಕರ್ತವ್ಯಕ್ಕೆ ಹಾಜರಾಗಬೇಕಾಗಿತ್ತು. ಆದರೆ ಇದೀಗ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಹಲವಾರು ಸಂದೇಹಗಳಿಗೆ ಕಾರಣವಾಗಿದೆ. ಘಟನಾ ಸ್ಥಳಕ್ಕೆ ಕಿತ್ತೂರು ಪಿಎಸ್ಐ ಪ್ರವೀಣ ಗಂಗೋಳ, ಪ್ರವೀಣ ಕೋಟಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.