ಮಂಗಳೂರು: ಕಲ್ಕತಾ ನಗರದಲ್ಲಿ ಕಾರ್ಯಾಚರಿಸುತ್ತಿರುವ ಆರ್. ಜೆ. ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ರಾತ್ರಿ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮತ್ತು ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದ ಮಹಿಳಾ ವೈದ್ಯರ ಮೇಲೆ ಹಿಂಸಾತ್ಮಕ ಕೃತ್ಯ, ಲೈಂಗಿಕ ದೌರ್ಜನ್ಯ ಮತ್ತು ಸಾಮೂಹಿಕ ಅತ್ಯಾಚಾರ ಎಸಗಿ ಭೀಕರ ಕೊಲೆ ಮಾಡಿದ ಪ್ರಕರಣವನ್ನು ವ್ಯಾಪಕ ಖಂಡಿಸಿ ಮತ್ತು ಆಕ್ರೋಶ ವ್ಯಕ್ತಪಡಿಸಿ ನಗರದ ಭಾರತೀಯ ವೈದ್ಯಕೀಯ ಸಂಘ, ದ.ಕ. ಜಿಲ್ಲಾ ಶಾಖೆಯ ಸುಮಾರು ೪೦೦ ವೈದ್ಯ ತಂಡದವರು ತಮ್ಮ ಕಛೇರಿಯ ಮುಂಭಾಗದಲ್ಲಿ ಬೀದಿಗಿಳಿದು ತಾ: ೧೩.೦೮.೨೦೨೪ ರಂದು ಸಂಜೆ ೬.೩೦ ಕ್ಕೆ ಮೊಂಬತ್ತಿ ಬೆಳಗಿಸಿ ಹೀನಾಯ ಕೃತ್ಯವನ್ನು ತೀವ್ರವಾಗಿ ಪ್ರತಿಭಟಿಸಿ ಮಾನವ ಸರಪಳಿ ನಿರ್ಮಿಸಿ ಮುಷ್ಕರ ನಡೆಸಿದರು.
ಈ ಪ್ರತಿಭಟನೆಯ ಮುಂದಾಳತ್ವವನ್ನು ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ ಅಧ್ಯಕ್ಷ ಡಾ. ರಂಜನ್ ಆರ್. ಕೆ., ಕಾರ್ಯದರ್ಶಿ ಡಾ. ಅವಿನ್ ಆಳ್ವ, ಕೋಶಾಧಿಕಾರಿ ಡಾ. ಪ್ರಶಾಂತ್, ಉಪಾಧ್ಯಕ್ಷ ಡಾ. ಮಹಾಬಲೇಶ್ ಶೆಟ್ಟಿ, ಚುನಾಯಿತ ಅಧ್ಯಕ್ಷೆ ಡಾ. ಜೆಸ್ಸಿ ಮೇರಿ ಡಿಸೋಜ, ಮಹಿಳಾ ವಿಭಾಗದ ಅಧ್ಯಕ್ಷೆ ಡಾ. ಪ್ರಭಾ ಅಧಿಕಾರಿ, ಮಾಜಿ ಅಧ್ಯಕ್ಷರಾದ ಡಾ. ಎಮ್.ವಿ. ಪ್ರಭು, ಡಾ. ಕೆ.ಆರ್. ಕಾಮತ್, ಡಾ. ಅಣ್ಣಯ್ಯ ಕುಲಾಲ್ ಮತ್ತು ಭಾರತೀಯ ವೈದ್ಯಕೀಯ ಸಂಘ ಪ್ರತಿಷ್ಟಾನದ ಅಧ್ಯಕ್ಷ ಡಾ. ದಿವಾಕರ್ ರಾವ್ ವಹಿಸಿದ್ದರು.
ಈ ಪ್ರತಿಭಟನೆಯು ಸರ್ಕಾರದ ಶೀಘ್ರ ಗಮನ ಸೆಳೆಯಲು, ಸಂತ್ರಸ್ತರ ಕುಟುಂಬ ಸದಸ್ಯರಿಗೆ ಸೂಕ್ತ ನ್ಯಾಯ ಒದಗಿಸಲು ಹಾಗೂ ಅಪರಾಧಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವ ಸಲುವಾಗಿ ಹಮ್ಮಿಕೊಳ್ಳಲಾಗಿತ್ತು ಹಾಗೂ ವೈದ್ಯರು ತಮ್ಮ ಕರ್ತವ್ಯ ನಿರ್ವಹಿಸುವ ಮತ್ತು ಸೇವೆ ಸಲ್ಲಿಸುವ ಸಮಯದಲ್ಲಿ ಸೂಕ್ತ ಭದ್ರತೆ ಮತ್ತು ರಕ್ಷಣೆ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು.