ಚೆನ್ನೈ: ಮಹಿಳಾ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತೀಯ ತಂಡವು ನೂತನ ಇತಿಹಾಸ ಬರೆದಿದೆ. ಇಲ್ಲಿನ ಎಂ.ಎ. ಚಿದಂಬರಂ ಮೈದಾನದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಆರು ವಿಕೆಟ್ ನಷ್ಟಕ್ಕೆ 603 ರನ್ ಗಳಿಸಿ ದಾಖಲೆ ರಚಿಸಿದೆ. ಮಹಿಳಾ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಇದಾಗಿದೆ. 600ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ತಂಡವೆಂಬ ಕೀರ್ತಿಗೂ ಪಾತ್ರವಾಯಿತು.
ಮೊದಲ ಆಟದಲ್ಲಿ ಶೆಫಾಲಿ ವರ್ಮಾ ಚೊಚ್ಚಲ ದ್ವಿಶತಕ (205) ಗಳಿಸಿದರು. ಸ್ಮೃತಿ ಮಂದನ (149) ಎರಡನೇ ಶತಕ ಸಾಧನೆ ಮಾಡಿದರು. ಅಲ್ಲದೆ ಮೊದಲ ವಿಕೆಟ್‌ಗೆ ದಾಖಲೆಯ 292 ರನ್ ದಾಖಲಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ 194 ರನ್ ಗಳಿಸಿದ ಹೆಗ್ಗಳಿಕೆಗೂ ಶೆಫಾಲಿ ಪಾತ್ರರಾದರು.
ಮೊದಲ ದಿನದಾಟದಲ್ಲಿ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 525 ರನ್ ಗಳಿಸಿತು. ಇದೂ ಒಂದೇ ದಿನದಾಟದಲ್ಲಿ ಗಳಿಸಿದ ಗರಿಷ್ಟ ಮೊತ್ತವಾಗಿದೆ. ಎರಡನೇ ದಿನ ನಾಯಕಿ ಹರ್ಮನ್ ಪ್ರೀತ್ ಕೌರ್ (69) ಹಾಗೂ ರಿಚಾ ಘೋಷ್ (86) ಅರ್ಧ ಶತಕಗಳ ಸಾಧನೆ ಮಾಡಿದ್ದಾರೆ. ಮೊದಲ ದಿನದಾಟದಲ್ಲಿ ಜೆಮಿಮಾ ರೊಡ್ರಿಗಸ್ ಸಹ ಅರ್ಧ ಶತಕ (55) ದಾಖಲಿಸಿದ್ದರು.