Monday, February 10, 2025
Homeಅಪರಾಧಅಮಾನವೀಯ ರ‍್ಯಾಗಿಂಗ್ : 15 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ

ಅಮಾನವೀಯ ರ‍್ಯಾಗಿಂಗ್ : 15 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ

ಕೊಚ್ಚಿ : ಕೇರಳದ ಕೊಚ್ಚಿಯ ತ್ರಿಪುಣಿತರಾದಲ್ಲಿ ಇತ್ತೀಚೆಗೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಸುದ್ದಿಯಾಗಿತ್ತು. ಆದರೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ದೊರೆತಿದ್ದು, ಬಾಲಕನಿಗೆ ಶಾಲೆಯಲ್ಲಿ ಭಯಾನಕವಾಗಿ ರ‍್ಯಾಗಿಂಗ್ ಮಾಡಲಾಗಿತ್ತು ಎಂದು ಆತನ ತಾಯಿ ಆರೋಪಿಸಿದ್ದಾರೆ. ಟಾಯ್ಲೆಟ್ ಸೀಟ್ ನೆಕ್ಕುವಂತೆ ಮಾಡಿದ್ದಲ್ಲದೆ, ಫ್ಲಷ್ ಮಾಡುವಾಗ ಕಮೋಡ್​ನಲ್ಲಿ ಆತನ ತಲೆಯನ್ನು ಮುಳುಗಿಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

15 ವರ್ಷದ ವಿದ್ಯಾರ್ಥಿ ಮಿಹಿರ್ ಅಹ್ಮದ್ ಕೆಲವು ದಿನಗಳ ಹಿಂದೆ 26ನೇ ಮಹಡಿಯ ಫ್ಲಾಟ್​​​ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಬಗ್ಗೆ ಇದೀಗ ಆತನ ತಾಯಿ ಗಂಭೀರ ಆರೋಪ ಮಾಡಿದ್ದಾರೆ.

ಮಿಹಿರ್ ಅಹ್ಮದ್ ತಾಯಿ ಹೇಳಿದ್ದೇನು?

ಮಗನ ಮರಣದ ನಂತರ, ಮಿಹಿರ್ ಏಕೆ ಅಂತಹ ಕಠಿಣ ನಿರ್ಧಾರ ಕೈಗೊಂಡ ಎಂಬುದನ್ನು ಅರ್ಥಮಾಡಿಕೊಳ್ಳಲು ನನ್ನ ಪತಿ ಮತ್ತು ನಾನು ಮಾಹಿತಿ ಸಂಗ್ರಹಿಸಲು ಪ್ರಾರಂಭಿಸಿದೆವು. ಆತನ ಸ್ನೇಹಿತರು, ಸಹಪಾಠಿಗಳು ಮತ್ತು ಸಾಮಾಜಿಕ ಮಾಧ್ಯಮ ಸಂದೇಶಗಳನ್ನು ಪರಿಶೀಲಿಸಿದಾಗ ಆತ ಅನುಭವಿಸಿದ ಭಯಾನಕ ವಾಸ್ತವ ಗಮನಕ್ಕೆ ಬಂತು. ಶಾಲೆಯಲ್ಲಿ ಮತ್ತು ಶಾಲಾ ಬಸ್‌ನಲ್ಲಿ ವಿದ್ಯಾರ್ಥಿಗಳ ಗುಂಪಿನಿಂದ ಕ್ರೂರವಾಗಿ ರ‍್ಯಾಗಿಂಗ್, ಬೆದರಿಸುವಿಕೆ ಮತ್ತು ದೈಹಿಕ ಹಲ್ಲೆ ಆತ ಆ ಕಠಿಣ ನಿರ್ಧಾರಕ್ಕೆ ಬರಲು ಕಾರಣವಾಯಿತು ಎಂದು ತಾಯಿ ಸಾಮಾಜಿಕ ಮಾಧ್ಯದಲ್ಲಿ ಮಾಡಿದ ಪೋಸ್ಟ್​​ನಲ್ಲಿ ಆರೋಪಿಸಿದ್ದಾರೆ.

ಮಿಹಿರ್​​ನನ್ನು ಥಳಿಸಲಾಗಿತ್ತು. ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿತ್ತು ಮತ್ತು ಆತನ ಜೀವನದ ಕೊನೆಯ ದಿನ ಯಾರೂ ಊಹಿಸಲಾಗದ ಅವಮಾನವನ್ನು ಮಾಡಲಾಗಿತ್ತು. ಅವನನ್ನು ಬಲವಂತವಾಗಿ ವಾಶ್​ರೂಮ್​ಗೆ ಕರೆದೊಯ್ದು, ಟಾಯ್ಲೆಟ್ ಸೀಟ್ ಅನ್ನು ನೆಕ್ಕಲು ಬಲವಂತ ಮಾಡಲಾಗಿತ್ತು. ಅಷ್ಟೇ ಅಲ್ಲದೆ, ಟಾಯ್ಲೆಟ್ ಅನ್ನು ಫ್ಲಶ್ ಮಾಡಿದಾಗ ಆತನ ತಲೆಯನ್ನು ಕಮೋಡ್​ ಒಳಕ್ಕೆ ತಳ್ಳಲಾಗಿತ್ತು. ಈ ಕ್ರೌರ್ಯದ ಕೃತ್ಯಗಳು ಆತನಿಗೆ ಗಂಭೀರ ಘಾಸಿ ಮಾಡಿದವು ಎಂದು ಅವರು ಹೇಳಿದ್ದಾರೆ.

ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಪಿಣರಾಯಿ ವಿಜಯನ್​ಗೆ ಪತ್ರ

ಘಟನೆ ಸಂಬಂಧ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಮಿಹಿರ್ ತಾಯಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿ ಮತ್ತು ಕೇರಳ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ತಮ್ಮ ಮಗನ ಸಾವಿನ ಬಗ್ಗೆ ತಕ್ಷಣದ ಮತ್ತು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ.

ಮಿಹಿರ್ ಜನವರಿ 15 ರಂದು ಶಾಲೆಯಿಂದ ಮರಳಿದ ಕೇವಲ ಒಂದು ಗಂಟೆಯ ನಂತರ ಕೊಚ್ಚಿಯ ತ್ರಿಪುಣಿತರಾದಲ್ಲಿನ ತಮ್ಮ 26 ನೇ ಮಹಡಿಯ ಫ್ಲಾಟ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ.

RELATED ARTICLES
- Advertisment -
Google search engine

Most Popular