ಉಪ್ಪಿನಂಗಡಿ: ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಇನ್ನೋವಾ ಕಾರೊಂದು ಶಿರಾಡಿ ಘಾಟಿಯಲ್ಲಿ ಭೀಕರ ಅಪಘಾತಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ಒಂದೇ ಕುಟುಂಬದ ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಇನೋವಾ ಕಾರು ಮಂಗಳವಾರ ಬೆಳ್ಳಂಬೆಳಗ್ಗೆ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ತಾಯಿ-ಮಗ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿದ್ದ ಇತರರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಹೀಗಾಗಿ ಅವರನ್ನು ತಕ್ಷಣವೇ ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತಪಟ್ಟವರನ್ನು ಪಾಣೆಮಂಗಳೂರು ಬೊಂಡಾಲದ ಶಬ್ಬೀರ್ ಎಂಬವರ ಮಗ 20 ವರ್ಷದ ಶಫೀಕ್ ಹಾಗೂ ಶಬ್ಬೀರ್ ಅವರ ಪತ್ನಿ 50 ವರ್ಷದ ಸಫಿಯಾ ಎಂದು ಗುರುತಿಸಲಾಗಿದೆ.
ಬೆಂಗಳೂರಿನಲ್ಲಿ ಸಂಬಂಧಿಕರೊಬ್ಬರ ಮದುವೆ ಔತಣಕೂಟದಲ್ಲಿ ಭಾಗಿಯಾಗಿ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಟ್ರಕ್ ಒಂದು ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.