Sunday, July 14, 2024
Homeರಾಜಕೀಯ10 ಕ್ಷೇತ್ರಗಳಿಗೆ ಹೊಸ ಮುಖ ಪರಿಚಯ; ಬೆಂ. ಉತ್ತರಕ್ಕೆ ಶೋಭಾ, ಕಟೀಲ್ ಜಾಗಕ್ಕೆ ಕ್ಯಾಪ್ಟನ್

10 ಕ್ಷೇತ್ರಗಳಿಗೆ ಹೊಸ ಮುಖ ಪರಿಚಯ; ಬೆಂ. ಉತ್ತರಕ್ಕೆ ಶೋಭಾ, ಕಟೀಲ್ ಜಾಗಕ್ಕೆ ಕ್ಯಾಪ್ಟನ್

ನವದೆಹಲಿ ಲೋಕಸಭೆ ಚುನಾವಣೆಯ 2ನೇ ಪಟ್ಟಿಯಲ್ಲಿ 72 ಅಭ್ಯರ್ಥಿಗಳ ಹೆಸರು ಘೊಷಿಸಿರುವ ಬಿಜೆಪಿ, ಕರ್ನಾಟಕದ 20 ಸೀಟುಗಳನ್ನು ಅಂತಿಮಗೊಳಿಸಿದೆ. ನಿರೀಕ್ಷೆಯಂತೆ ಭರ್ಜರಿ ಸರ್ಜರಿ ನಡೆಸಿರುವ ವರಿಷ್ಠರು 20 ಸೀಟುಗಳ ಪೈಕಿ 10 ಕ್ಷೇತ್ರಗಳಿಗೆ ಹೊಸ ಮುಖ ಪರಿಚಯಿಸಿದ್ದಾರೆ.

8 ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಟಿಕೆಟ್ ತಪ್ಪಿದ್ದರೆ, ಶೋಭಾ ಕರಂದ್ಲಾಜೆಗೆ ಉಡುಪಿ ಚಿಕ್ಕಮಗಳೂರು ಬದಲು ಬೆಂಗಳೂರು ಉತ್ತರ ಕ್ಷೇತ್ರ ಕೊಡಲಾಗಿದೆ. ಅದೇ ರೀತಿ ದಾವಣಗೆರೆ ಟಿಕೆಟ್ ಸಿದ್ದೇಶ್ವರ್ ಕೈತಪ್ಪಿದರೂ ಅವರ ಕುಟುಂಬಕ್ಕೆ ಸಿಕ್ಕಿದೆ. ಜಾತಿ ಸಮೀಕರಣ, ಸ್ಥಳೀಯ ಲೆಕ್ಕಾಚಾರ ಸೇರಿ ಹಲವು ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಅಭ್ಯರ್ಥಿ ಆಯ್ಕೆ ಮಾಡಲಾಗಿದೆ.

ಜೋಶಿಗೆ ಟಿಕೆಟ್: ರಾಜ್ಯದಿಂದ ಆಯ್ಕೆಯಾದ ಕೇಂದ್ರ ಸಚಿವರಲ್ಲಿ ಪ್ರಲ್ಹಾದ ಜೋಶಿ ಹುಬ್ಬಳ್ಳಿ-ಧಾರವಾಡ ಮತ್ತು ಭಗವಂತ ಖೂಬಾ ಬೀದರ್ ಕ್ಷೇತ್ರದಿಂದಲೇ ಕಣಕ್ಕಿಳಿಯಲಿದ್ದಾರೆ. ಬೀದರ್ ನಲ್ಲಿ ಬಿಜೆಪಿ ಶಾಸಕರು, ಮುಖಂಡರಿಂದ ಭಾರೀ ವಿರೋಧ ಎದುರಿಸಿದರೂ, ಭಗವಂತ ಖುಬಾಗೇ ಟಿಕೆಟ್ ನೀಡಿರುವುದು ಅಚ್ಚರಿ ಮೂಡಿಸಿದೆ. ಪಕ್ಷದೊಳಗಿನ ವಿರೋಧದ ನಡುವೆ ದೆಹಲಿಯಲ್ಲಿ ಬಿಜೆಪಿ ನಾಯಕರ ಮನೆಗಳಿಗೆ ಎಡತಾಕುತ್ತಾ, ದೆಹಲಿಗೆ ಬಂದಿದ್ದ ರಾಜ್ಯ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದ ಖೂಬಾ, ಟಿಕೆಟ್ಗಾಗಿ ಸಾಕಷ್ಟು ಸರ್ಕಸ್ ನಡೆಸಿದ್ದರು. ಕೊನೆಗೂ ಅವರ ಬೇಡಿಕೆ ಈಡೇರಿದೆ. ಆದರೆ, ಸ್ಥಳೀಯ ನಾಯಕರ ಸಹಕಾರ ಸಿಗಲಿದೆಯೇ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.

ಕಟೀಲ್ ಗೆ ಆಘಾತ: ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ದಕ್ಷಿಣ ಕನ್ನಡ ಟಿಕೆಟ್ ತಪ್ಪಿರುವುದು ಮಹತ್ವದ ಬೆಳವಣಿಗೆ. ಬಂಟ ಸಮುದಾಯದ ಕಟೀಲ್ ಬದಲಿಗೆ ಅದೇ ಸಮುದಾಯದ ಕ್ಯಾಪ್ಟನ್ ಬೃಜೇಶ್ ಚೌಟರಿಗೆ ಮಣೆ ಹಾಕಲಾಗಿದೆ. ಬೃಜೇಶ್ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದವರು ಮತ್ತು ಜಿಲ್ಲೆಯಲ್ಲಿ ಯುವ ನಾಯಕರಾಗಿ ಪ್ರಸಿದ್ಧಿ ಗಳಿಸುತ್ತಿದ್ದರೆ. ದಕ್ಷಿಣ ಕನ್ನಡದಲ್ಲಿ ಯಾರಿಗೆ ಬೇಕಾದರೂ ಟಿಕೆಟ್ ನೀಡಿ, ಆದರೆ ಕಟೀಲ್ ಗೆ ಬೇಡ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳು ನಡೆದಿದ್ದವು. ಮೇಲಾಗಿ, ಕಟೀಲ್ ಗೆ ಟಿಕೆಟ್ ಕೊಟ್ಟರೆ ಬಂಡಾಯ ಅಭ್ಯರ್ಥಿಯಾಗಿ, ತಾವು ಸ್ಪರ್ಧೆ ಮಾಡುವುದಾಗಿ ಅರುಣ್ ಕುಮಾರ್ ಪುತ್ತಿಲ ಬೆದರಿಕೆ ಹಾಕಿದ್ದರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ಹೈಕಮಾಂಡ್, ರಾಜ್ಯ ನಾಯಕರ ಸಲಹೆಯಂತೆ ಚೌಟರಿಗೆ ಅವಕಾಶ ನೀಡಿದೆ.

ಶೋಭಾ ಕ್ಷೇತ್ರ ಬದಲು: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ, ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಕಳುಹಿಸಲು ವರಿಷ್ಠರು ತೀರ್ವನಿಸಿದ್ದಾರೆ. ಇಲ್ಲಿ ಶೋಭಾ ವಿರೋಧಿ ಅಲೆ ದಿನೇದಿನೇ ಹೆಚ್ಚಿದ್ದರಿಂದ ಬಿಲ್ಲವ ಸಮುದಾಯದ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಟಿಕೆಟ್ ನೀಡಲಾಗಿದೆ. ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದ, ಮಾಜಿ ಸಿಎಂ ಡಿವಿ ಸದಾನಂದ ಗೌಡ, ಚುನಾವಣಾ ರಾಜಕೀಯದಿಂದ ನಿವೃತ್ತಿ ಘೊಷಿಸಿದ ಬೆನ್ನಲ್ಲೇ ಶೋಭಾಗೆ ಟಿಕೆಟ್ ಘೊಷಿಸಲಾಗಿದೆ. ಡಿವಿಎಸ್, ಶೋಭಾ ಇಬ್ಬರೂ ಈ ಕ್ಷೇತ್ರಕ್ಕೆ ವಲಸಿಗರು. ಆದರೆ, ಶೋಭಾ ಮಟ್ಟಿಗೆ ಇದು ಸುರಕ್ಷಿತ ಕ್ಷೇತ್ರ ಎಂದೇ ವಿಶ್ಲೇಷಿಸಲಾಗಿದೆ. ಸೌಮ್ಯ ಸ್ವಭಾವದ ಕೋಟಾಗೆ ಉಡುಪಿ-ಚಿಕ್ಕಮಗಳೂರು ಮತದಾರರು ಬೆಂಬಲಿಸಬಹುದು ಎಂಬ ನಂಬಿಕೆ ಬಿಜೆಪಿಯದ್ದು.

ಒಡೆಯರ್ ಗೆ ಮಣೆ: ನಿರೀಕ್ಷೆಯಂತೆ ಮೈಸೂರು ಸಂಸದ ಪ್ರತಾಪ್ ಸಿಂಹರಿಗೆ ಟಿಕೆಟ್ ನೀಡದಿರಲು ವರಿಷ್ಠರು ನಿರ್ಧರಿಸಿದ್ದು, ಮೈಸೂರು ರಾಜ ವಂಶಸ್ಥ ಯದುವೀರ್ ಒಡೆಯರ್ ಗೆ ಟಿಕೆಟ್ ನೀಡಲಾಗಿದೆ. ಅರಸು ಮನೆತನಕ್ಕೆ ರಾಜಕೀಯ ಹೊಸತಲ್ಲ. ಈ ಹಿಂದೆ ಶ್ರೀಕಂಠದತ್ತ ಒಡೆಯರ್ ಅವರು ಕಾಂಗ್ರೆಸ್ ಪಕ್ಷದಿಂದ ಹಲವು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಈಗ ಅದೇ ಕುಟುಂಬದ ಯದುವೀರ್ ಬಿಜೆಪಿಯಿಂದ ಸಂಸತ್ ಪ್ರವೇಶಿಸುವ ಯತ್ನ ಮಾಡಲಿದ್ದಾರೆ. ಸ್ಥಳೀಯ ಮುಖಂಡರ ಜತೆಗಿನ ವೈಮನಸ್ಯ, ಕಾರ್ಯಕರ್ತರು, ಶಾಸಕರ ವಿರೋಧ, ಪಕ್ಷ ಸಂಘಟನೆಗೆ ಕೊಡುಗೆ ನೀಡಿಲ್ಲ ಎಂಬ ಕಾರಣಕ್ಕಾಗಿ ಪ್ರತಾಪ್ ಸಿಂಹಗೆ ಟಿಕೆಟ್ ಸಿಕ್ಕಿಲ್ಲ ಎನ್ನಲಾಗಿದೆ. ಆದರೆ, ಸಂಸದರಾಗಿ ಅವರ ಕೆಲಸಗಳ ಬಗ್ಗೆ ಯಾರೂ ಆಕ್ಷೇಪ ತೆಗೆದಿಲ್ಲ ಎನ್ನುವುದೂ ಇಲ್ಲಿ ಗಮನಾರ್ಹ.

RELATED ARTICLES
- Advertisment -
Google search engine

Most Popular