ಉಪ್ಪಿನಂಗಡಿ: ಕೆಎಸ್ಸಾರ್ಟಿಸಿಗೆ ಸೇರಿದ ಐರಾವತ ಬಸ್ಸೊಂದರಲ್ಲಿ ಬೆಂಕಿ ಕಾಣಿಸಿದ ಘಟನೆ ಉಪ್ಪಿನಂಗಡಿ ಹಳೆಗೇಟು ಬಳಿ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಐರಾವತ ಬಸ್ಸಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿತ್ತು. ಹೊಗೆ ಬರುತ್ತಿರುವುದನ್ನು ಗಮನಿಸಿದ ಚಾಲಕ ಬಸ್ಸನ್ನು ನಿಲ್ಲಿಸಿ ಪರೀಕ್ಷಿಸಿದಾಗ, ಬಸ್ಸಿನ ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಗೊತ್ತಾಗಿದೆ. ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ತಕ್ಷಣ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ರಕ್ಷಿಸಲಾಯಿತು. ನಂತರ ಅವರನ್ನು ಬೇರೊಂದು ಬಸ್ಸಲ್ಲಿ ಮಂಗಳೂರಿಗೆ ಕಳುಹಿಸಿಕೊಡಲಾಯಿತು. ಮಳೆಯಿಂದಾಗಿ ರಸ್ತೆ ಬದಿಯಲ್ಲಿ ಸಂಗ್ರಹವಾಗಿದ್ದ ನೀರನ್ನು ಬಳಸಿಕೊಂಡು ಸ್ಥಳೀಯರ ಸಹಕಾರದೊಂದಿಗೆ ಬೆಂಕಿಯನ್ನು ನಂದಿಸಲಾಯಿತು. ಬಸ್ಸು ಚಾಲಕ, ನಿರ್ವಾಹಕರ ಸಮಯ ಪ್ರಜ್ಞೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.