ಬೀದರ್: ನೀಟ್ ಪರೀಕ್ಷೆಯಿಂದ ಕರ್ನಾಟಕ ಹೊರಬರಬೇಕೆಂದು ಆಗ್ರಹಿಸಿ ವಿಧಾನಸಭೆಯಲ್ಲಿ ನಿಲುವಳಿ ಮಂಡಿಸಲು ನಿರ್ಧರಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು. ಅವರು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಜು. 16ರಿಂದ ವಿಧಾನಸಭೆ ಅಧಿವೇಶನ ಆರಂಭಗೊಳ್ಳಲಿದೆ. ಈ ವೇಳೆ ನೀಟ್ ಕುರಿತು ಚರ್ಚೆಯಾಗಲಿದೆ. ಅದರಿಂದ ಹೊರಬರುವ ಕುರಿತು ನಾನೇ ನಿಲುವಳಿ ಮಂಡಿಸುತ್ತೇನೆ. ನೀಟ್‌ನಿಂದ ಹೊರಗುಳಿಯಲು ಈಗಾಗಲೇ ತಮಿಳುನಾಡು, ಕೇರಳ ಸೇರಿದಂತೆ ಹಲವು ರಾಜ್ಯಗಳು ಪ್ರಮುಖ ತೀರ್ಮಾನ ಕೈಗೊಂಡಿವೆ ಎಂದು ಅವರು ಹೇಳಿದರು.
ನೀಟ್ ವಿಷಯದಲ್ಲಿ ದೊಡ್ಡ ಪ್ರಮಾಣದ ಹಗರಣ ನಡೆದಿದೆ. ಅದರಿಂದ ಅನೇಕ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ. ಅನೇಕ ವಿದ್ಯಾರ್ಥಿಗಳು ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ನಡೆಸುವ ನೀಟ್ ಬಗ್ಗೆ ಈಗ ಭರವಸೆ ಉಳಿದಿಲ್ಲ ಎಂದು ಅವರು ಹೇಳಿದರು.
ವೀರಪ್ಪ ಮೊಯಿಲಿ ಅವರು ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಿಇಟಿ ಪರಿಚಯಿಸಿದ್ದರು. ಅದು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. ಪುನಃ ಅಂತಹ ವ್ಯವಸ್ಥೆ ತರಲು ಚಿಂತನೆ ನಡೆದಿದೆ ಎಂದು ಅವರು ಹೇಳಿದರು.