ಮಂಗಳೂರು: ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ಕ್ಷೇತ್ರ ಶಾಸಕರೂ ಆದ ಯು.ಟಿ. ಖಾದರ್ ಮುಂದಾಳತ್ವ ಹಾಗೂ ಪೂರ್ಣ ಸಹಕಾರದಲ್ಲಿ ನರಿಂಗಾನ ಕಂಬಳ ಸಮಿತಿ ಆಶ್ರಯದಲ್ಲಿ ಮತ್ತು ನರಿಂಗಾನ ಗ್ರಾಮ ಪಂಚಾಯತ್ ಸಹಕಾರದಲ್ಲಿ ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಮೋರ್ಲ-ಬೋಳದಲ್ಲಿ ಜ. 11ರಂದು ಬೆಳಗ್ಗೆ ಗಂಟೆ 8.30ರಿಂದ ತೃತೀಯ ವರ್ಷದ ಹೊನಲು ಬೆಳಕಿನ ಲವ-ಕುಶ ಜೋಡುಕರೆ “ನರಿಂಗಾನ ಕಂಬಳೋತ್ಸವ” ಜರಗಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಪೀಕರ್ ಯು.ಟಿ. ಖಾದರ್, ಕಂಬಳಕ್ಕೆ ನನ್ನ ಸಂಪೂರ್ಣ ಸಹಕಾರವಿದ್ದು, ಕಂಬಳಕ್ಕೆ ಈ ಬಾರಿ ವಿಶೇಷ ಆಕರ್ಷಣೆಯಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹಲವು ಬಾರಿ ಅವರ ಗಮನಕ್ಕೆ ತರಲಾಗಿತ್ತಾದರೂ ಮಂಗಳವಾರ ಕಂಬಳ ಸಮಿತಿಯ ಪ್ರಮುಖರು ವಿಧಾನ ಸಭೆ ಕಚೇರಿಯಲ್ಲಿ ಮುಖ್ಯಮಂತ್ರಿಗಳಿಗೆ ಖುದ್ದಾಗಿ ಆಮಂತ್ರಣ ನೀಡಿ ಬಂದಿದ್ದಾರೆ. ಮುಂದಿನ ವಾರದಲ್ಲಿ ಇಲ್ಲಿಗೆ ಬರುವ ದಿನ ನಿಗದಿ ಆಗಿದ್ದರೂ ನರಿಂಗಾನ ಕಂಬಳ ಕುರಿತಾಗಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಅವರು ಬರುವುದರಿಂದ ನಮ್ಮ ಜಾನಪದ ಕ್ರೀಡೆ ಕಂಬಳಕ್ಕೆ ದೊಡ್ಡ ಅನುದಾನ ದೊರಕಬಹುದು, ಕಂಬಳ ಕ್ಷೇತ್ರಕ್ಕೆ ಒಂದು ದೊಡ್ಡ ಪ್ರಯೋಜನ ಆಗಬಹುದು ಎಂಬ ನಿರೀಕ್ಷೆ ಇದೆ ಎಂದರು.
ಪಜೀರಿನಲ್ಲಿ 25 ವರ್ಷ ಕಂಬಳ ನಡೆಸಿದ, ಕೋಣದ ಯಜಮಾನರು ಆಗಿರುವ ಖ್ಯಾತ ಕೃಷಿಕ ಶ್ರೀ ವೆಂಕಪ್ಪ ಕಾಜವ ಮಿತ್ತಕೋಡಿ ಗೌರವಾಧ್ಯಕ್ಷತೆಯಲ್ಲಿ ಅದೇ ಅನುಭವ ಪಡೆದುಕೊಂಡಿರುವ ಅವರ ಪುತ್ರ ಜಿಲ್ಲಾ ಕಂಬಳ ಸಮಿತಿಯ ಉಪಾಧ್ಯಕ್ಷರರು ಆಗಿರುವ ಪ್ರಶಾಂತ್ ಕಾಜವ ಮಿತ್ತಕೋಡಿ ಕಾರ್ಯಧ್ಯಕ್ಷತೆಯಲ್ಲಿ ಕಳೆದ ಎರಡು ವರ್ಷ ನಡೆದ ಕಂಬಳ ಅಭೂತಪೂರ್ವ ಯಶಸ್ಸು ದಾಖಲಿಸಿದೆ.
ನರಿಂಗಾನ ಗ್ರಾಮ ಪಂಚಾಯತ್ ಸಹಕಾರ, ಪಂಚಾಯತ್ ಅಧ್ಯಕ್ಷರು ನವಾಜ್ ನರಿಂಗಾನ ಈ ಕಂಬಳ ಸಮಿತಿಯಲ್ಲಿ ಪ್ರಧಾನ ಕಾರ್ಯದರ್ಶಿ ಆಗಿದ್ದು, ಕಂಬಳ ಕೋಣಗಳನ್ನು ಸ್ಪರ್ಧೆಯಲ್ಲಿ ಓಡಿಸುವುದರಲ್ಲಿ ಹಿಂದಿನಿಂದಲೂ ಹೆಸರು ಗಳಿಸಿರುವ ಮೋರ್ಲದ ಚಂದ್ರಹಾಸ್ ಶೆಟ್ಟಿ, ಗಿರೀಶ್ ಆಳ್ವ, ಮ್ಯಾಕ್ಸಿಯಂ ಡಿಸೋಜ, ಕರುಣಾಕರ ಶೆಟ್ಟಿ ಸೇರಿದಂತೆ ಒಂದು ಸಮರ್ಥ ಸಮಿತಿ, ಕಂಬಳಾಭಿಮಾನಿಗಳು, ದೇಶ ವಿದೇಶದಿಂದ ನಮ್ಮ ಕಂಬಳಕ್ಕೆ ಪೂರ್ಣ ಪ್ರಮಾಣದ ಸಹಕಾರ ನೀಡಿರುವುದು ಯಶಸ್ಸಿಗೆ ಕಾರಣವಾಗಿದೆ ಎಂದು ಹೇಳಿದರು.
ಕರೆಯ ಗಾತ್ರದಲ್ಲೂ ದೊಡ್ಡದಾಗಿರುವ ನರಿಂಗಾನ ಕಂಬಳ ಕೇವಲ ಎರಡು ವರ್ಷದಲ್ಲೇ ಜಿಲ್ಲೆಯಲ್ಲಿ ನಡೆದ ಸುಮಾರು 24 ಕಂಬಳಗಳ ಪೈಕಿ ಮೂರನೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೋಣಗಳು ಭಾಗವಹಿಸಿದ ದಾಖಲೆಗೆ ಪಾತ್ರವಾಗಿದೆ. ಹಾಗೆಯೇ ಕೋಣದ ಯಜಮಾನರುಗಳಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು, ದೂರದ ಭಟ್ಕಳ, ಬಾರಕೂರು ಒಳಭಾಗದಿಂದ ಕೋಣಗಳನ್ನು ಸ್ಪರ್ಧೆಗೆ ಕರೆ ತರಲಾಗಿತ್ತು. ಸ್ಪರ್ಧೆಯಲ್ಲಿ ಎಲ್ಲ ವಿಭಾಗ ದಲ್ಲೂ ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ಬಹುಮಾನ ಚಿನ್ನದ ಪದಕ ಇದೆ.
ಸ್ಪರ್ಧಾ ಕೂಟದಲ್ಲಿ ಭಾಗವಹಿಸಿದ ಕೋಣದ ಯಜಮಾನರಿಗೆ ಬೆಳ್ಳಿಯ ಪದಕ ಹಾಗೂ ಟ್ರೋಫಿ ಕೊಟ್ಟು ಗೌರವಿಸಲಾಗುವುದು. ವಿಜೇತ ಕೋಣಗಳನ್ನು ಓಡಿಸಿದ ಓಟಗಾರರಿಗೆ ಪ್ರಶಸ್ತಿ ಪತ್ರದೊಂದಿಗೆ ಬಹುಮಾನ ನೀಡಿ ಗೌರವಿಸಲಾಗುವುದು. ಕಂಬಳ ಕೋಣಗಳ ಯಜಮಾನ ದಿ. ಸುಧಾಕರ ಆಳ್ವ ಮೋರ್ಲ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉದ್ಘಾಟನೆ ಮಾಡಲಿದ್ದು, ಶ್ರೀ ಕ್ಷೇತ್ರ ಶಾಂತಿಪಳಿಕೆಯ ಪ್ರಧಾನ ತಂತ್ರಿ ಶ್ರೀ ವೇ. ಮ. ವರ್ಕಾಡಿ ಹೊಸಮನೆ ರಾಜೇಶ್ ತಾಳಿತ್ತಾಯರು ದ್ವೀಪ ಪ್ರಜ್ವಲನೆಗೈಯುವರು. ದ. ಕ. ಜಿಲ್ಲಾಧಿಕಾರಿ ಮುಲೈಮುಹಿಲನ್, ಸಯ್ಯದ್ ಮದನಿ ದರ್ಗಾ ಹಾಗೂ ಕೇಂದ್ರ ಜುಮಾ ಮಸೀದ್ ಉಳ್ಳಾಲದ ಅಧ್ಯಕ್ಷರು ಪಿ.ಜಿ.ಹನೀಫ್ ಹಾಜಿ, ಬೋಳ ಸಂತ ಲಾರೆನ್ಸ್ ದೇವಾಲಯದ ಧರ್ಮಗುರು ರೆ. ಫಾ. ಫೆಡ್ರಿಕ್ ಕೊರೆಯ, ಧಾರ್ಮಿಕ, ಸಾಮಾಜಿಕ ರಂಗ ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ನವಾಝ್ ನರಿಂಗಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸಭಾ ಕಾರ್ಯಕ್ರಮ ಸಂಜೆ 4.30ಕ್ಕೆ ಆರಂಭಗೊಳ್ಳಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್ ಯು.ಟಿ.ಖಾದರ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್, ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಯುವಜನ ಮತ್ತು ಕ್ರೀಡಾ ಸಚಿವ ಎಚ್.ಕೆ.ಪಟೀಲ್, ಕೃಷಿ ಸಚಿವ ಚೆಲುವರಾಯ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ರಾಜಮೋಹನ್ ಉನ್ನಿತನ್, ಎಸ್‌ಡಿಸಿಸಿ ಬ್ಯಾಂಕ್ ಮಂಗಳೂರು ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್, ಡಾ. ಪ್ರಕಾಶ್ ಶೆಟ್ಟಿ (ಆಡಳಿತ ನಿರ್ದೇಶಕರು, ಬಂಜಾರ ಗ್ರೂಪ್ ಆಫ್ ಹೊಟೇಲ್ಸ್), ಡಾ. ರೊನಾಲ್ಡ್ ಕೊಲಸೊ (ಅನಿವಾಸಿ ಭಾರತೀಯ ಉದ್ಯಮಿ), ನಾಡೋಜ ಡಾ. ಜಿ. ಶಂಕರ್ (ಪ್ರವರ್ತಕರು, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಅಂಬಲಪಾಡಿ ಉಡುಪಿ) ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಉದ್ಯಮಿಗಳು ಭಾಗವಹಿಸಲಿದ್ದಾರೆ ಎಂದರು.
ವಿಶೇಷ ಆಹ್ವಾನಿತರಾಗಿ ಸುನಿಲ್ ಶೆಟ್ಟಿ (ಬಾಲಿವುಡ್ ನಟ), ರೂಪೇಶ್ ಶೆಟ್ಟಿ (ಚಲನಚಿತ್ರ ನಟ), ಅರವಿಂದ್ ಬೋಳಾರ (ಚಲನಚಿತ್ರ ನಟ), ಪ್ರದೀಪ್ ಆಳ್ವ ಕದ್ರಿ (ಚಲನಚಿತ್ರ ನಟ), ದೇವ್‌ದಾಸ್ ಕಾಪಿಕಾಡ್ (ಚಲನಚಿತ್ರ ನಟ),ಮಂಜು ಎಂ. ರೈ (ಚಲನಚಿತ್ರ ನಟ), ಭೋಜರಾಜ್ ವಾಮಂಜೂರು (ಚಲನಚಿತ್ರ ನಟ), ಸೂರಜ್ ಶೆಟ್ಟಿ (ಚಲನಚಿತ್ರ ನಟ) ಆಗಮಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗುಣಪಾಲ ಕಡಂಬ (ಕಾರ್ಯಧ್ಯಕ್ಷರು. ದ.ಕ. ಜಿಲ್ಲಾ ಕಂಬಳ ಸಮಿತಿ). ಎಂ.ರಾಜೀವ ಶೆಟ್ಟಿ ಎತ್ತೂರು (ಪ್ರಧಾನ ತೀರ್ಪುಗಾರರು, ದ.ಕ. ಜಿಲ್ಲಾ ಕಂಬಳ), ಯುವಕ ಮಂಡಲ (ರಿ.) ನರಿಂಗಾನ ತೌಡುಗೋಳಿ (ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ), ಚಂದ್ರಹಾಸ್ ಶೆಟ್ಟಿ ಮೋರ್ಲ (ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು), ಜೋನ್ ಸಿರಿಲ್ ಡಿಸೋಜ (ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು) ಸನ್ಮಾನಿಸಲ್ಪಡಲಿದ್ದಾರೆ ಎಂದರು.
ಜ. 13ರಂದು ನರಿಂಗಾನ ಗ್ರಾಮೋತ್ಸವ 2025
ಮಧ್ಯಾಹ್ನ ಗಂಟೆ 2.000
ಸ್ನೇಹ ಸಮ್ಮಿಲನ, ಪ್ರತಿಭಾ ಪುರಸ್ಕಾರ, ಜಿಲ್ಲೆಯ ಪ್ರಸಿದ್ದ ಕಲಾವಿದರಿಂದ ನೃತ್ಯ ವೈಭವ, ಸ್ಪರ್ಧೆಗಳು ನಡೆಯಲಿದೆ.
ಮಹಿಳೆಯರಿಗೆ ಹಗ್ಗ-ಜಗ್ಗಾಟ, ಪಾಸಿಂಗ್ ಬಾಲ್, ಬಕೆಟ್ ಒಳಗೆ ಗುರಿ ಇಟ್ಟು ಚೆಂಡು ಎಸೆತ, ಬಾಳೆಹಣ್ಣು ತಿನ್ನುವ ಸ್ಪರ್ಧೆ, ಕಂಬಳ ಕರೆಯಲ್ಲಿ ನಿಧಿ ಶೋಧನೆ, ಕಿರು ಪ್ರಹಸನ, ಸಂಗೀತ ಕುರ್ಚಿ, 100 ಮೀಟರ್ ಓಟ, 200 ಮೀಟರ್ ಓಟ, ಬಾಯಿಯ ಒಳಗಡೆ ಚಮಚ, ಚಮಚದಲ್ಲಿ ಲಿಂಬೆ ಸಹಿತ ಓಟ ನಡೆಯಲಿದೆ.
ಪುರುಷರಿಗೆ ಹಗ್ಗ-ಜಗ್ಗಾಟ, ಗೋಣಿ ಚೀಲ ಓಟ, ಬಾಳೆಹಣ್ಣು ತಿನ್ನುವ ಸ್ಪರ್ಧೆ, ಬಕೆಟ್ ಒಳಗೆ ಗುರಿ ಇಟ್ಟು ಚೆಂಡು ಎಸೆತ, ಕಂಬಳ ಕರೆಯಲ್ಲಿ ನಿಧಿ ಶೋಧನೆ, ಕಿರು ಪ್ರಹಸನ, ಸಂಗೀತ ಕುರ್ಚಿ, 100ಮೀಟರ್ ಓಟ, 200 ಮೀಟರ್ ಓಟ, ಬಾಯಿಯ ಒಳಗಡೆ ಚಮಚ, ಚಮಚದಲ್ಲಿ ಲಿಂಬೆ ಇಟ್ಟು ಓಟ ನಡೆಯಲಿದೆ. ಅಲ್ಲದೆ, ಸಮಯಾವಕಾಶ ಹೊಂದಿಕೊಂಡು ಇನ್ನಷ್ಟು ಸ್ಪರ್ಧೆಗಳನ್ನು ನಡೆಸಲಾಗುವುದು ಬಳಿಕ ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ ನಡೆಯಲಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಮಾಹಿತಿ ನೀಡಿದರು.