Saturday, February 15, 2025
Homeಮೂಡುಬಿದಿರೆಜ.25 : ಮೂಡುಬಿದಿರೆಯಲ್ಲಿ 22ನೇ ವರ್ಷದ "ಕೋಟಿ-ಚೆನ್ನಯ' ಜೋಡುಕರೆ ಕಂಬಳ

ಜ.25 : ಮೂಡುಬಿದಿರೆಯಲ್ಲಿ 22ನೇ ವರ್ಷದ “ಕೋಟಿ-ಚೆನ್ನಯ’ ಜೋಡುಕರೆ ಕಂಬಳ


ಮೂಡುಬಿದಿರೆ: ‘ಕೋಟಿ-ಚೆನ್ನಯ’ ಜೋಡುಕರೆ ಕಂಬಳ ಸಮಿತಿಯ ವತಿಯಿಂದಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ ‘ವೀರ ರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮ’ ದಲ್ಲಿ 22ನೇ ವರ್ಷದ ಹೊನಲು ಬೆಳಕಿನ ‘ಕೋಟಿ-ಚೆನ್ನಯ’ ಜೋಡುಕರೆ ಕಂಬಳೋತ್ಸವವು ಜ.25ರಂದು ನಡೆಯಲಿದೆ ಎಂದು ಶಾಸಕ, ಕಂಬಳ ಸಮಿತಿಯ ಅಧ್ಯಕ್ಷ ಉಮಾನಾಥ ಎ. ಕೋಟ್ಯಾನ್ ತಿಳಿಸಿದರು. ಅವರು ಗುರುವಾರ ಸೃಷ್ಠಿ ಗಾರ್ಡನ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಸಮಯಕ್ಕೆ ಸರಿಯಾಗಿ ಕಂಬಳವನ್ನು ಆರಂಭಿಸಿ ಆದಷ್ಟು ಬೇಗ ಮುಗಿಸುವ ನಿಟ್ಟಿನಲ್ಲಿ ಬೆಳಿಗ್ಗೆ 7ಕ್ಕೆ ಕಾರ್ಯಕ್ರಮವನ್ನು ಆರಂಭಿಸಲಾಗುವುದು. ಚೌಟರ ಅರಮನೆಯ ಕುಲದೀಪ ಎಂ. ಅಧ್ಯಕ್ಷತೆಯಲ್ಲಿ ಅಲಂಗಾರು ಶ್ರೀ ಬಡಗು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತಸರ ವೇ.ಮೂ ಈಶ್ವರ ಭಟ್, ಅಲಂಗಾರು ಚರ್ಚ್ ಧರ್ಮಗುರು ಮೆಲ್ವಿನ್ ನೊರೊನ್ಹಾ, ಪುತ್ತಿಗೆ ನೂರಾನಿ ಮಸ್ಟ್ರೀದ್‌ನ ಮೌಲಾನ ಝಿಯಾವುಲ್ಸ್, ಸುಧೀರ್ ಹೆಗ್ಡೆ ಕುಂಟಾಡಿ ಅವರೆಲ್ಲರೂ ಒಟ್ಟಾಗಿ ಸೇರಿ ಕಂಬಳ ಕರೆಗೆ ಪ್ರಸಾದ ಹಾಕಿ ಹಾಲನೆರೆಯುವ ಮೂಲಕ ಕಂಬಳಕ್ಕೆ ಚಾಲನೆ ನೀಡಲಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಅನುಪಮ ಅಗರ್ವಾಲ್, ರಾಣಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆಯನ್ನು ಮಾಡಲಿದ್ದು, ಸಭಾ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮುಖ್ಯ ಮುಹಿಲನ್ ಉದ್ಘಾಟಿಸಲಿರುವರು. ಅಂತರಾಷ್ಟ್ರೀಯ ವಾಸ್ತು ತಜ್ಞ ಮೂಲ್ಕಿ ಚಂದ್ರಶೇಖರ ಸ್ವಾಮೀಜಿ ಅವರಿಗೆ ರಾಜ್ಯಮಟ್ಟದ ರಾಣಿ ಅಬ್ಬಕ್ಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ, ದ.ಕ ಸಂಸದ ಬ್ರಿಜೇಶ್ ಚೌಟ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಲಿದ್ದಾರೆಂದು ತಿಳಿಸಿದರು.
ಎಲ್ಲಾ ಕಂಬಳಾಭಿಮಾನಿಗಳಿಗೂ ಬೆಳಿಗ್ಗೆ 11.30 ರಿಂದ 3 ಗಂಟೆಯವರೆಗೂ ಗಂಜಿ ಊಟದ ವ್ಯವಸ್ಥೆ ಇದೆ ಎಂದರು.
ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ ಮಾತನಾಡಿ, ಈ ಬಾರಿ ವಿಶೇಷವಾಗಿ ಕಂಬಳದ ಆರಂಭದಲ್ಲಿ ಕೋಣಗಳನ್ನು ಬಿಡುವಲ್ಲಿ ಸೆನ್ಸಾರ್ ಸಿಸ್ಟಮ್‌ನ್ನು ಅಳವಡಿಸಲಾಗಿದೆ. ತಂತ್ರಜ್ಞಾನ ವ್ಯವಸ್ಥೆಯನ್ನು ಮೂಡುಬಿದಿರೆಯ ಕೋಟಿ ಚೆನ್ನಯ ಕಂಬಳಕರೆಯಲ್ಲಿ ಪೂರ್ಣವಾಗಿ ಸಿಸ್ಟಮ್‌ನ್ನು ಅಳವಡಿಸಲಾಗಿದ್ದು ಕೊಟ್ಟ ಸಮಯಾವಧಿ ಮೀರಿದ ನಂತರ ಒಂದೆರಡು ನಿಮಿಷ ಕಾಲಾವಕಾಶ ಮಾತ್ರ ಇರುತ್ತದೆ. ಆನಂತರ ತಕ್ಷಣವೇ ಎರಡು ಕಡೆಯಿಂದಲೂ ಸೆನ್ಸಾರ್ ಸಿಸ್ಟಮ್ ಆನ್ ಆಗಿ ಬಾವುಟ ಹಾರಿಸಲಾಗುತ್ತದೆ. ಅತೀ ವೇಗವಾಗಿ ಕಂಬಳವನ್ನು ಮುಗಿಸುವ ಸಲುವಾಗಿ ತಂತ್ರಜ್ಞಾನವನ್ನಿಟ್ಟು ಈ ಸೆನ್ಸರ್ ಸಿಸ್ಟಮ್‌ನ್ನು ಅಳವಡಿಸಲಾಗಿದೆ ಎಂದರು.

ಕೆಎಂಎಫ್ ಅಧ್ಯಕ್ಷ ಸುಚರಿತ ಶೆಟ್ಟಿ, ಬಿಜೆಪಿ ಮುಲ್ಕಿ-ಮೂಡುಬಿದಿರೆ ಮಂಡಲದ ಅಧ್ಯಕ್ಷ ದಿನೇಶ್ ಪುತ್ರನ್, ಕಂಬಳ ಸಮಿತಿಯ ಕೋಶಾಧ್ಯಕ್ಷರಾದ ಭಾಸ್ಕರ್ ಎಸ್ ಕೋಟ್ಯಾನ್, ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ರಂಜಿತ್ ಪೂಜಾರಿ, ಹರಿಪ್ರಸಾದ್ ಶೆಟ್ಟಿ ಸುದ್ದಿಗೋಷ್ಟಿಯಲ್ಲಿದ್ದರು.

RELATED ARTICLES
- Advertisment -
Google search engine

Most Popular