ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳು ಸಾಹಿತ್ಯ ಓದುವ ಅಭಿಯಾನದ ‘ ಅಕಾಡೆಮಿಡ್ ಒಂಜಿ ದಿನ : ಬಲೆ ತುಳು ಓದುಗ’ ಕಾರ್ಯಕ್ರಮವು ಜ.9 ರಂದು ನಡೆಯಲಿದೆ.
ಕಾಲೇಜು ವಿದ್ಯಾರ್ಥಿಗಳನ್ನು ಅಕಾಡೆಮಿ ಗ್ರಂಥಾಲಯಕ್ಕೆ ಆಹ್ವಾನಿಸಿ ತುಳು ಸಾಹಿತ್ಯ ಓದುವ ಅಭಿರುಚಿ ಮೂಡಿಸುವ ಸಲುವಾಗಿ ಅಕಾಡೆಮಿಡ್ ಒಂಜಿ ದಿನ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಎರಡನೇ ಕಾರ್ಯಕ್ರಮ ಇದಾಗಿದೆ.
ಜ.6 ರಂದು ಕೂಳೂರಿನ ಯೆನೆಪೋಯ ಕಾಲೇಜಿನ 50 ವಿದ್ಯಾರ್ಥಿಗಳು ಅಕಾಡೆಮಿ ಗ್ರಂಥಾಲಯಕ್ಕೆ ಭೇಟಿ ನೀಡಲಿದ್ದಾರೆ.
ಬೆಳಿಗ್ಗೆ 10.00 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಹಿರಿಯ ತುಳು ನಾಟಕಕಾರ,ಲೇಖಕ ಪರಮಾನಂದ ಸಾಲ್ಯಾನ್ ಕಾರ್ಯಕ್ರಮ ಉದ್ಘಾಟಿಸುವರು.
ಇದೇ ಕಾರ್ಯಕ್ರಮದಲ್ಲಿ ಅಕಾಡೆಮಿಯ ತ್ರೈಮಾಸಿಕ ಪತ್ರಿಕೆ ಮದಿಪು ಬಿಡುಗಡೆಯಾಗಲಿದೆ. ಹಿರಿಯ ಪತ್ರಕರ್ತ ಹಾಗೂ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅವರು ‘ಮದಿಪು’ ಸಂಚಿಕೆ ಬಿಡುಗಡೆ ಮಾಡುವರು. ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸುವರು.
ಯೆನೆಪೋಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ನಿಯಾಜ್. ಪಿ.ಅಕಾಡೆಮಿಯ ಸದಸ್ಯರಾದ ರವಿರಾಜ್ ಸುವರ್ಣ ಮುಂಬಯಿ ಹಾಗೂ ನಾಗೇಶ್ ಕುಮಾರ್ ಉದ್ಯಾವರ ಅತಿಥಿಗಳಾಗಿ ಭಾಗವಹಿಸುವರು.
ದಿನಪೂರ್ತಿ ಅಕಾಡೆಮಿಯ ಗ್ರಂಥಾಲಯದಲ್ಲಿ ಓದು ಮತ್ತು ಸಂವಾದದಲ್ಲಿ ಭಾಗಿಯಾಗುವ ವಿದ್ಯಾರ್ಥಿಗಳು ಸಂಜೆ ತಮ್ಮ ಓದಿನ ಬಗೆಗೆ ಅಭಿಪ್ರಾಯ ಹಂಚಿಕೊಳ್ಳುವರು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.