ಮುಂಬೈ: ಇದ್ದದ್ದು 2,216 ಹುದ್ದೆಗಳು, ಆದರೆ ಇಂಟರ್ವ್ಯೂಗೆ ಹಾಜರಾಗಿದ್ದು ಬರೋಬ್ಬರಿ 25,000 ಮಂದಿ!, ಇದು ಮುಂಬೈ ವಿಮಾನ ನಿಲ್ದಾಣದಲ್ಲಿ ಕಂಡು ಬಂದ ದೃಶ್ಯ!. ಮುಂಬೈ ವಿಮಾನ ನಿಲ್ದಾಣದಲ್ಲಿ ಖಾಲಿಯಿದ್ದ 2,216 ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ಆಯೋಜಿಸಲಾಗಿತ್ತು. ಆದರೆ ಸಂದರ್ಶನಕ್ಕೆ ಬರೋಬ್ಬರಿ 25,000ಕ್ಕೂ ಹೆಚ್ಚು ಮಂದಿ ಆಗಮಿಸಿ, ಕಾಲ್ತುಳಿತದಂತಹ ಸ್ಥಿತಿ ನಿರ್ಮಾಣವಾಗಿತ್ತು.
ವಿಮಾನ ನಿಲ್ದಾಣದ ಹೊರಗೆ ಸಾವಿರಾರು ಜನ ನೂಕುನುಗ್ಗಲಿನಲ್ಲಿ ತಳ್ಳಾಡುವ ದೃಶ್ಯವುಳ್ಳ ವಿಡಿಯೊ ವೈರಲ್ ಆಗಿದೆ. ಸಂದರ್ಶನಕ್ಕೆ ಬಂದ ಭಾರೀ ಸಂಖ್ಯೆಯ ಜನರನ್ನು ನೋಡಿ ವಿಮಾನ ನಿಲ್ದಾಣದ ಸಿಬ್ಬಂದಿ ಬೆಚ್ಚಿಬಿದ್ದಿದ್ದು, ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟಿದ್ದಾರೆ. ಸಂದರ್ಶನಕ್ಕೆ ಬಂದ ಅಭ್ಯರ್ಥಿಗಳೂ ಆಹಾರ, ನೀರಿಲ್ಲದೆ ಹಲವು ಗಂಟೆಗಳ ಕಾಲ ಕಾದು ಅಸ್ವಸ್ಥರಾದರು ಎಂದು ವರದಿಗಳು ತಿಳಿಸಿವೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಎಷ್ಟೊಂದು ದೊಡ್ಡ ಪ್ರಮಾಣದಲ್ಲಿ ತಾಂಡವವಾಡುತ್ತಿದೆ ಎಂಬುದು ಈ ಒಂದು ನಿದರ್ಶನದಿಂದ ತಿಳಿಯಬಹುದು. ಈ ಉದ್ಯೋಗವೇನೂ ಲಕ್ಷಾಂತರ ರೂ. ಸಂಬಳ ಬರುವಂತದ್ದೇನೂ ಅಲ್ಲ. ಇದು ತಿಂಗಳಿಗೆ ಕೇವಲ 20,000 ಸಂಬಳದ ಕೆಲಸ. ಹೀಗಿದ್ದರೂ ಇಷ್ಟೊಂದು ಮಂದಿ ಬಂದಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ.
ವಿಡಿಯೊ ನೋಡಲು ಇಲ್ಲಿ ಕ್ಲಿಕ್ ಮಾಡಿ…