ಸುರತ್ಕಲ್: ಜೋಕಟ್ಟೆ ಬಳಿ ಬಾಲಕಿಯೊಬ್ಬಳ ಹತ್ಯೆ ನಡೆದು 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಪರಸಘಡ ಹಂಚಿನಾಳದ ಫಕ್ಕೀರಪ್ಪ ಹಣಮಪ್ಪ ಮಾದರ (51) ಬಂಧಿತ ಆರೋಪಿ. ಆರು ತಿಂಗಳಿನಿಂದ ಜೋಕಟ್ಟೆ ಪರಿಸರದಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ ಆರೋಪಿ ಬಾಲಕಿಯ ಮನೆಯವರಿಗೆ ಪರಿಚಿತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ಬಾಲಕಿ ಬೆಳಗಾವಿಯ ರಾಮದುರ್ಗ ತಾಲೂಕಿನವಳು. ಕೈ ನೋವಿನ ಸಲುವಾಗಿ ಚಿಕಿತ್ಸೆ ಪಡೆಯಲೆಂದು ಜೋಕಟ್ಟೆಯಲ್ಲಿ ಸಂಬಂಧಿಕರ ಮನೆಯಲ್ಲಿ ಆಕೆ ಉಳಿದುಕೊಂಡಿದ್ದಳು. ಮನೆಯವರೆಲ್ಲ ಕೆಲಸಕ್ಕೆ ಹೋಗಿದ್ದ ವೇಳೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ. ಬಾಲಕಿ ಪ್ರತಿಭಟಿಸಿದ್ದರಿಂದ ಆಕೆಯನ್ನು ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಆತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೋ ಇಲ್ಲವೋ ಎಂಬುದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕವಷ್ಟೇ ದೃಢಪಡಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಪಣಂಬೂರು ಠಾಣಾಧಿಕಾರಿ ಮೊಹಮ್ಮದ್ ಸಲೀಂ ಅಬ್ಬಾಸ್, ಕಾನೂನು ಸುವ್ಯವಸ್ಥೆ ವಿಭಾಗದ ಎಸ್‌ಐ ಶ್ರೀಕಲಾ ಕೆ.ಟಿ., ಎ.ಎಸ್ೈ ಹೆಡ್ ಕಾನ್ಸ್‌ಟೇಬಲ್‌ಗಳಾದ ಸತೀಶ್ ಎಂ.ಆರ್., ಸಯ್ಯದ್ ಇಮ್ತಿಯಾಜ್, ಪೊಲೀಸ್ ಕಾನ್ಸ್‌ಟೇಬಲ್‌ಗಳಾದ ಸತೀಶ್ ಎಂ.ಆರ್., ಸಯ್ಯದ್ ಇಮ್ತಿಯಾಜ್, ಪೊಲೀಸ್ ಕಾನ್ಸ್‌ಟೇಬಲ್‌ಗಳಾದ ಶಶಿಕುಮಾರ್, ರಾಕೇಶ್ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.
ಆರೋಪಿಯು ಪೊಲೀಸರು ಮಹಜರು ಮಾಡುವಾಗ ಸ್ಥಳದಲ್ಲೇ ಇದ್ದ. ಏನೂ ಗೊತ್ತಿಲ್ಲದ ಅಮಾಯಕನಂತೆ ನಟಿಸಿದ್ದ. ಕೃತ್ಯ ನಡೆಸಿದ ಮನೆಗೆ ಆತ ಹೋಗಿ ಬರುತ್ತಿದ್ದ ಬಗ್ಗೆ ಕೆಲವರು ಮಾಹಿತಿ ನೀಡಿದ್ದರು. ಆತನ ಚಲನವಲನದಿಂದ ಸಂಶಯಗೊಂಡು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ನಡೆಸಿದ್ದನ್ನು ಒಪ್ಪಿಕೊಂಡನೆಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ವರದಿಯೊಂದು ತಿಳಿಸಿದೆ.