ಬಜಪೆ : ಕೊಂಚಾಡಿ ದೇರೆಬೈಲಿನ ಶ್ರೀ ರಾಮ ಭಜನಾ ಮಂದಿರದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನ ಕರ್ನಾಟಕ ಮಂಗಳೂರು ಮತ್ತು ಕೆ. ಎನ್. ಶೆಟ್ಟಿ ಸಂಸ್ಮರಣಾ ಸಮಿತಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗ ಕ್ಷೇತ್ರದಲ್ಲಿ 25 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿರುವ ಮಂಗಳಜ್ಯೋತಿ ಎಸ್‍ಡಿಎಂ ಸಮಗ್ರ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶೇಖರ ಕಡ್ತಲ ಅವರಿಗೆ 8ನೇ ವರ್ಷದ ಕೆ. ಎನ್. ಶೆಟ್ಟಿ ಸಂಸ್ಮರಣಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಂಗಳೂರಿನ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಹಾಗೂ ಸ್ಥಾಪಕ ಅಧ್ಯಕ್ಷರಾಗಿದ್ದು ನೂರಾರು ಯೋಗ ಶಿಬಿರ ಹಾಗೂ ಯೋಗ ಸ್ಪರ್ಧೆ ಸಂಘಟಿಸಿ, ಯೋಗ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಯೋಗ ಪ್ರತಿಷ್ಠಾನದ ಅಧ್ಯಕ್ಷ ಏಕನಾಥ ಬಾಳಿಗ ಅಧ್ಯಕ್ಷತೆ ವಹಿಸಿದ್ದರು. ಯೋಗ ಗುರು ಕುಶಾಲಪ್ಪ ಗೌಡ, ಸನಾತನ ನಾಟ್ಯಾಲಯದ ಚಂದ್ರಶೇಖರ ಶೆಟ್ಟಿ, ಪ್ರತಿಷ್ಠಾನದ ಸಂಚಾಲಕಿ ಭಾರತಿ ಶೆಟ್ಟಿ ಇದ್ದರು. ಉಪಾಧ್ಯಕ್ಷ ಯೋಗೀಶ ಶೆಟ್ಟಿ ಪ್ರಸ್ತಾವಿಸಿದರು. ಕಾರ್ಯದರ್ಶಿ ಧನಂಜಯ ಕೆ. ಸ್ವಾಗತಿಸಿದರು. ಅಶೋಕ್ ನಿರೂಪಿಸಿದರೆ, ಪ್ರಭಾ ಸಿ. ವಂದಿಸಿದರು.