ಕಡಬ: ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳ ತಂಡವೊಂದು ದಾಳಿ ನಡೆಸಿದ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯ ಎಣ್ಮೂರು ಗ್ರಾಮದಲ್ಲಿ ಮಾ.5 ರಂದು ಬೆಳಿಗ್ಗೆ ನಡೆದಿದ್ದು, ದಾಳಿ ನಡೆಸಿರುವ ಎನ್‌ಐಎ ಅಧಿಕಾರಿಗಳು ಕೇರಳ ಮೂಲದ ಬಿಜು ಅಬ್ರಹಾಂ ಎಂಬಾತನನ್ನು ಬಂಧಿಸಿದ್ದಾರೆ.
ಮಾ.5 ರಂದು ಬೆಳಿಗ್ಗೆ ದಾಳಿ ನಡೆಸಿದ್ದ ಅಧಿಕಾರಿಗಳು ವಿಚಾರಣೆ ಬಳಿಕ ಸಂಜೆಯ ವೇಳೆಗೆ ವಶಕ್ಕೆ ಪಡೆದಿದ್ದು ಬೆಂಗಳೂರಿಗೆ ಕರೆದೊಯ್ದಿರುವ ಮಾಹಿತಿಯಿದೆ.
ಆರೋಪಿ ಬಿಜು ಅಬ್ರಾಹಂ, ಎಣ್ಮೂರಿನಲ್ಲಿ ಚಿದಾನಂದ ಎಂಬವರಿಗೆ ಸೇರಿದ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ. ಬೆಂಗಳೂರಿನ ಸುಲ್ತಾನ್ ಪಾಳ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ಸಂಬಂಧಿಸಿ ಕಳೆದ ಅಕ್ಟೋಬರ್ ತಿಂಗಳಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಿಜುವನ್ನು ಬಂಧಿಸಲಾಗಿದೆ. ವಿಧ್ವಂಸಕ ಕೃತ್ಯಕ್ಕೆ ಸಂಚು ಹೂಡಿದ್ದ ಆರೋಪಿಗಳಿಗೆ ಬಿಜು ಅಬ್ರಾಹಂ ಆಶ್ರಯ ನೀಡಿದ್ದ ಎಂಬ ಆರೋಪದಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಬಿಜು ಮನೆಯಲ್ಲಿ ಏಕಾಏಕಿ ದಾಳಿ ನಡೆಸಿ ಶೋಧ ನಡೆಸಿರುವ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದು ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದಾರೆ.