ಮಂಗಳೂರು: ಇತಿಹಾಸ ಪ್ರಸಿದ್ಧ ಕದ್ರಿ ದೇವಸ್ಥಾನದ ಒಳಾಂಗಣಕ್ಕೆ ಬೈಕ್ ತಂದ ವ್ಯಕ್ತಿಯೊಬ್ಬ ದೇವಸ್ಥಾನದ ಆವರಣದೊಳಗೆ ರಂಪಾಟ ಮಾಡಿದ ಘಟನೆಯ ಬಗ್ಗೆ ವರದಿಗಳು ತಿಳಿಸಿವೆ. ಖಾಸಗಿ ಆಸ್ಪತ್ರೆಯೊಂದರ ಸೆಕ್ಯುರಿಟಿ ಸಿಬ್ಬಂದಿ ಸುಧಾಕರ ಆಚಾರ್ಯ ಎಂಬಾತ ದೇವಸ್ಥಾನದೊಳಗೆ ಅಕ್ರಮವಾಗಿ ಪ್ರವೇಶಿಸಿ ದಾಂಧಲೆ ನಡೆಸಿದ್ದಾನೆ ಎನ್ನಲಾಗಿದೆ.
ದೇವಾಲಯದ ಒಳಗೆ ಬೈಕಿನಲ್ಲಿ ಬಂದು, ದೇವಸ್ಥಾನದೊಳಗೆ ಸುತ್ತಿದ ಸುಧಾಕರ ಆಚಾರ್ಯ ಬಳಿಕ, ಅಣ್ಣಪ್ಪ ದೇವರ ಗುಡಿಯೊಳಗೆ ಪ್ರವೇಶಿಸಿ ಅಣ್ಣಪ್ಪ ಸ್ವಾಮಿಯ ಕಡ್ತಲೆ ತೆಗೆದು ಅಪಚಾರ ಎಸಗಿದ್ದಾನೆ. ಈ ವೇಳೆ ಗುಡಿಯ ಬಾಗಿಲನ್ನು ಒದ್ದು ಆತ ಗುಡಿ ಪ್ರವೇಶಿಸಿದ್ದಾನೆ ಎನ್ನಲಾಗಿದೆ. ಅಣ್ಣಪ್ಪ ಸ್ವಾಮಿಯ ಗುಡಿಯೊಳಗೆ ನುಗ್ಗಿದ್ದಲ್ಲದೆ, ಮಂಟಪದ ಮೇಲೂ ಹತ್ತಿ ದಾಂಧಲೆ ಮಾಡಿರುತ್ತಾನೆ. ಅರ್ಚಕರ ಮೇಲೆ ಹಲ್ಲೆಯನ್ನೂ ನಡೆಸಿದ್ದಾನೆ ಎನ್ನಲಾಗಿದೆ.
ಅಣ್ಣಪ್ಪ ಸ್ವಾಮಿ ಕಡ್ತಲೆ ಮುಟ್ಟಿದ ಕಾರಣಕ್ಕಾಗಿ ಶುದ್ಧೀಕರಣ ಮಾಡಲಾಗಿದೆ. ಯುವಕನನ್ನು ದೇವಸ್ಥಾನದಲ್ಲಿದ್ದವರು ಸೇರಿ ಹಿಡಿದು ಕಟ್ಟಿಹಾಕಿ ಬಳಿಕ ಪೊಲೀಸರಿಗೊಪ್ಪಿಸಿದ್ದಾರೆ. ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ. ಯುವಕನ ರಂಪಾಟದಿಂದ ದೇವರಿಗೆ ಮುಂಜಾನೆ ನಡೆಯಬೇಕಿದ್ದ ಪೂಜೆ ರದ್ದಾಗಿತ್ತು ಎಂದು ತಿಳಿದುಬಂದಿದೆ.