ಬಂಟ್ವಾಳ: ಯಕ್ಷಗಾನ ಕ್ಷೇತ್ರದ ಪ್ರತಿಯೊಂದು ಪ್ರಸಂಗದಲ್ಲೂ ಬೇರೆ ಬೇರೆ ಸ್ವಭಾವದ ವೇಷಗಳನ್ನು ಹಾಸ್ಯಗಾರನು ನಿರ್ವಹಿಸುವ ಅಗತ್ಯವಿದ್ದು, ಆ ಪಾತ್ರದ ಸ್ವಭಾವ ಮತ್ತು ಪ್ರಸಂಗದ ಬಗ್ಗೆ ಜ್ಞಾನ ಹೊಂದಿದ್ದವರ ಪೈಕಿ ಬಂಟ್ವಾಳ ಜಯರಾಮ ಆಚಾರ್ಯರು ಒಬ್ಬರು. ದೈಹಿಕ ಮತ್ತು ಮಾನಸಿಕವಾಗಿಯೂ ಚುರುಕಾಗಿ, ವೇಗ ಮತ್ತು ವೈವಿಧ್ಯಮಯ ಹಾಗೂ ಪಾತ್ರಕ್ಕೆ ತಕ್ಕಂತೆ ಬಣ್ಣ ಹಾಕಿ ವೇಷ ಭೂಷಣ ತೊಟ್ಟು ರಂಗಪ್ರವೇಶ ಮಾಡುವ ಕಲೆಯೂ ಇವರಿಗಿತ್ತು. ಸದಾ ಅಧ್ಯಯನಶೀಲರಾಗಿ, ಕಲಾಸೇವೆ ಮಾಡುತ್ತಾ ಹಾಸ್ಯಗಾರರಾಗಿ ರಂಜಿಸಿದವರ ಪೈಕಿ ಬಂಟ್ವಾಳ ಜಯರಾಮ ಆಚಾರ್ಯರು ಎತ್ತಿದ ಕೈ. ಮಂತ್ರಿ, ಜ್ಯೋತಿಷಿ, ಪುರೋಹಿತ, ಪಾತ್ರಿ, ಅಜ್ಜ, ಅಜ್ಜಿ, ಮಂತ್ರವಾದಿ ಮತ್ತಿತರ ಪಾತ್ರಗಳಿಗೆ ಜೀವ ತುಂಬಿದ್ದ ಹೆಗ್ಗಳಿಕೆ ಇವರಿಗಿದೆ.
ಸರಳತೆ, ಸಜ್ಜನಿಕೆ, ಗರ್ವವಿಲ್ಲದ ವಿನಯವಂತ ಹಾಸ್ಯಗಾರರೂ ಆಗಿದ್ದ ಇವರು ಪಡ್ರೆ ಚಂದು, ಕರ್ಗಲ್ಲು ವಿಶ್ವೇಶ್ವರ ಭಟ್, ಸಬ್ಬಣಕೋಡಿ ಕೃಷ್ಣ ಭಟ್, ಸಬ್ಬಣಕೋಡಿ ರಾಮ ಭಟ್, ವಸಂತ ಗೌಡ ಕಾಯರ್ತಡ್ಕ, ವೇಣೂರು ಸದಾಶಿವ ಕುಲಾಲ್, ಹಳುವಳ್ಳಿ ಗಣೇಶ ಭಟ್, ಕೆ. ಎಂ. ಕೃಷ್ಣ ಮತ್ತಿತರ ಪ್ರಸಿದ್ಧ ಕಲಾವಿದರ ಸಹಪಾಠಿಯೂ ಆಗಿದ್ದರು.
ಕೋಳ್ಯೂರು ರಾಮಚಂದ್ರ ರಾವ್, ಕ್ರಿಶ್ಚನ್ ಬಾಬು, ಡಿ. ಮನೋಹರ ಕುಮಾರ್, ಮೂಡುಬಿದಿರೆ ಮಾಧವ ಶೆಟ್ರು, ಕುಡ್ತಡ್ಕ ಬಾಬು, ಸರಪಾಡಿ ಅಶೋಕ ಶೆಟ್ಟಿ, ಕುಂಬಳೆ ದಾಸಪ್ಪ ರೈ, ಹರಿದಾಸ ರಾಮದಾಸ ಸಾಮಗ, ಪೆರುವಾಯಿ ನಾರಾಯಣ ಶೆಟ್ಟಿ, ಅರುವ ನಾರಾಯಣ ಶೆಟ್ಟಿ ಮತ್ತಿತರ ಪ್ರಬುದ್ಧ ಕಲಾವಿದರೊಂದಿಗೆ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.
ಅಗರಿ ರಘುರಾಮ ಭಾಗವತ, ಪದ್ಯಾಣ ಗಣಪತಿ ಭಟ್, ತೆಕ್ಕಟ್ಟೆ ಆನಂದ ಮಾಸ್ತರ್, ಕೊಕ್ಕಡ ಈಶ್ವರ ಭಟ್, ಶಿವರಾಮ ಜೋಗಿ, ದಿನೇಶ ಅಮ್ಮಣ್ಣಾಯ ಮತ್ತಿತರ ಭಾಗವತರು ಹಾಗೂ ಅರುವ ಕೊರಗಪ್ಪ ಶೆಟ್ಟಿ, ಪುಳಿಂಚ ರಾಮಯ್ಯ ಶೆಟ್ಟಿ ಮತ್ತಿತರರೊಂದಿಗೆ ಹಾಸ್ಯ ಕಲಾವಿದರಾಗಿ ಜೊತೆಯಾಗಿದ್ದರು.
ಯಕ್ಷಗಾನ ಬಯಲಾಟ ಅಕಾಡೆಮಿ ನೀಡುವ ಗೌರವ ಪ್ರಶಸ್ತಿ ಸಹಿತ ವಿವಿಧ ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿದೆ.
-ಮೋಹನ್ ಕೆ.ಶ್ರೀಯಾನ್ ರಾಯಿ