Thursday, May 1, 2025
Homeಮಂಗಳೂರುಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಕಲಾಸ್ಪಂದನ 25

ಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಕಲಾಸ್ಪಂದನ 25

ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಸಾಂಸ್ಕೃತಿಕ ಸಂಭ್ರಮ ಕಲಾಸ್ಪಂದನ – 25 ಕಾರ್ಯಕ್ರಮವು ಇಂದು ಬೆಳಿಗ್ಗೆ ಉದ್ಘಾಟನೆಗೊಂಡಿತು. ಮಂಗಳೂರಿನ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತರು, ಆಸರೆ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರು, ಆಯುಷ್ ಫೌಂಡೇಶನ್ ಅಧ್ಯಕ್ಷರು, ಮತ್ತು ಮಾಲಾಡಿ ಎಸ್ಟೇಟ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರಾದ ಡಾ. ಆಶಾ ಜ್ಯೋತಿ ರೈ ಯವರು ಭಾಗವಹಿಸಿ, ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಹಿತಿ, ನಟ, ಗೀತೆ ರಚನೆಕಾರರು, ನಾಟಕಕಾರರು, ಸಿನೆಮಾಗಳಲ್ಲಿ ಸ್ಕ್ರಿಪ್ಟ್ ಬರಹಗಾರರು, ಹಾಗೂ ವೃತ್ತಿಯಲ್ಲಿ ವಕೀಲರಾದ  ಶಶಿರಾಜ್ ರಾವ್ ಕಾವೂರ್ ರವರು ಗೌರವ ಅತಿಥಿಗಳಾಗಿ ಭಾಗವಹಿಸಿದರು. ಕಲಾಸ್ಪಂದನ ಕಾರ್ಯಕ್ರಮದ ಈ  ವರ್ಷದ ಪರಿಕಲ್ಪನೆ “ಮಹಿಳಾ ಸಬಲೀಕರಣ, ನಾರಿ ಶಕ್ತಿ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಕಲೆಯಲ್ಲಿ ಮಹಿಳೆಯರ ಕೊಡುಗೆ”.  

ಶ್ರೀನಿವಾಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ. ಸತ್ಯನಾರಾಯಣ ರೆಡ್ಡಿ ಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಎನ್. ಹೆಗಡೆ, ಶ್ರೀನಿವಾಸ್ ವಿಶ್ವವಿದ್ಯಾಲಯದ ತರಬೇತಿ ಮತ್ತು ನೇಮಕಾತಿ ವಿಭಾಗದ ಮುಖ್ಯಸ್ಥೆ ಹಾಗೂ ಕಲಾಸ್ಪಂದನ-25 ಕಾರ್ಯಕ್ರಮದ ಸಂಚಾಲಕರಾದ ಡಾ. ಶ್ವೇತಾ ಪೈ, ಕಲಾಸ್ಪಂದನ-25 ರ ವಿದ್ಯಾರ್ಥಿ ಸಮನ್ವಯಕಾರರಾದ ಕುಮಾರಿ ವಿನಯಾ ಭಟ್ ಮತ್ತು  ಕಿರಣ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉದ್ಘಾಟನಾ ಭಾಷಣವನ್ನು ಮಾಡಿದ ಮುಖ್ಯ ಅತಿಥಿಗಳಾದ ಡಾ. ಆಶಾ ಜ್ಯೋತಿ ರೈ ಯವರು ಮಾತನಾಡಿ, ಯುವ ಶಕ್ತಿಯನ್ನು ಮೈಗೂಡಿಸಿಕೊಳ್ಳಬೇಕು, ಜೀವನದಲ್ಲಿ ಸತ್ಯಂ ಶಿವಂ ಸುಂದರಂ ತತ್ವವನ್ನು ಮೈಗೂಡಿಸಿಕೊಳ್ಳಬೇಕು, ಮತ್ತು ಬಹುಮುಖ ಪ್ರತಿಭೆಯ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ಭಾರತೀಯ ತತ್ತ್ವಶಾಸ್ತ್ರದ ಪ್ರಕಾರ 64 ವಿಭಿನ್ನ ಕಲಾ ಪ್ರಕಾರಗಳಿವೆ, ಭಾರತೀಯರು ಆಧ್ಯಾತ್ಮಿಕವಾಗಿ ಧನ್ಯರು, ದೇವರು ನೀಡಿದ ಜೀವನವು ಬಹಳ ಮುಖ್ಯ ಮತ್ತು ಅಮೂಲ್ಯವಾಗಿದೆ, ಅವಕಾಶ ಮತ್ತು ಸ್ವಾತಂತ್ರ್ಯವನ್ನು ಜವಾಬ್ದಾರಿಯಿಂದ ಬಳಸಿ, ಯುವಕರು ಬೇಡದ ವಿಷಯಗಳು ಮತ್ತು ಚಟುವಟಿಕೆಗಳಲ್ಲಿ ಶಕ್ತಿಯನ್ನು ವ್ಯರ್ಥ ಮಾಡಬಾರದು ಮತ್ತು ತಮ್ಮ ಸಾಮರ್ಥ್ಯಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು. ನಾವು ಲಿಂಗ ಸಮಾನತೆಯ ಕಡೆಗೆ ಕೆಲಸ ಮಾಡಬೇಕು, ಮಹಿಳೆಯರನ್ನು ಸಮಾನವಾಗಿ ನೋಡಿಕೊಳ್ಳಬೇಕು ಮತ್ತು ಗೌರವಿಸಬೇಕು, ಪರಿಸರವನ್ನು ಉಳಿಸಬೇಕು, ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು, ಸುಸ್ಥಿರ ಜೀವನ ಬಹಳ ಮುಖ್ಯ ಎಂದು ಹೇಳಿದರು. ಭಾರತ ನಮ್ಮ ಕರ್ಮಭೂಮಿ, ನಮ್ಮ ದೇಶ, ಮಣ್ಣು, ನೀರು, ಗಾಳಿಯನ್ನು ಪ್ರೀತಿಸಬೇಕು, ಹಾಗೂ ಭಾರತವನ್ನು ಹಸಿರು ಮತ್ತು ಸ್ವಚ್ಛವಾಗಿಸಬೇಕಾಗಿದೆ ಎಂದು ಹೇಳಿದರು.

ಉದ್ಘಾಟನಾ ಭಾಷಣವನ್ನು ಮಾಡಿದ ಗೌರವ ಅತಿಥಿಗಳಾದ ಶಶಿರಾಜ್ ರಾವ್ ಕಾವೂರ್ ರವರು ಮಾತನಾಡಿ, ಅನೇಕ ಇಂಜಿನಿಯರಿಂಗ್ ವೃತ್ತಿಪರರು ಸಂಗೀತ, ಲಲಿತ ಕಲಾ, ಮನರಂಜನೆ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ಆದ್ದರಿಂದ ಉತ್ತಮ ಅವಕಾಶಗಳು ಬಂದಲ್ಲಿ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು. ಮಹಿಳಾ ಸಬಲೀಕರಣದ ಕುರಿತು ಮಾತನಾಡಿದ ಅವರು ಪುರಾಣದಲ್ಲಿ ಉಲ್ಲೇಖವಾಗಿರುವ ಭೃಂಗಿ ಮಹರ್ಷಿ ಮತ್ತು ಅರ್ಧನಾರೀಶ್ವರ ರೂಪದ ಉದಾಹರಣೆಯನ್ನು ನೀಡಿದರು ಹಾಗೂ ಮಹಿಳೆಯರ ಸಶಕ್ತಿಕರಣದ ಮೂಲಕ  ಸಧೃಢ ಸಮಾಜ ಮತ್ತು ಸಶಕ್ತ ರಾಷ್ಟ್ರವನ್ನು ನಿರ್ಮಿಸುವಲ್ಲಿ ಮಹಿಳೆಯರ ಪಾತ್ರದ ಕುರಿತು ಮಾತನಾಡಿದರು.

ಅಧ್ಯಕ್ಷೀಯ ಭಾಷಣವನ್ನು ಮಾಡಿದ ಡಾ. ಕೆ. ಸತ್ಯನಾರಾಯಣ ರೆಡ್ಡಿ ಯವರು ಮಾತನಾಡಿ, ಕಲಿಕೆಯು ಜ್ಞಾನವನ್ನು ಸುಧಾರಿಸುತ್ತದೆ, ಕಲೆಯು ವ್ಯಕ್ತಿತ್ವವನ್ನು ಸಧೃಢಗೊಳಿಸುತ್ತದೆ ಮತ್ತು ಅದು ಮಿದುಳಿಗೆ ಸಂದೇಶವನ್ನು ರವಾನಿಸುವ ಜೀವಕೋಶಗಳ ನಡುವೆ ಇರುವ ಅಂತರವನ್ನು ಸಕ್ರಿಯಗೊಳಿಸುತ್ತದೆ, ಆ ಮೂಲಕ ಮೆದುಳಿನಲ್ಲಿ ಹೆಚ್ಚಿನ ಶಕ್ತಿಯನ್ನು ಉತ್ಪಾದಿಸುತ್ತದೆ ಎಂದು ಹೇಳಿದರು. ಇಂಜಿನಿಯರ್‌ ವೃತ್ತಿಪರರು ನೃತ್ಯ, ಹಾಡುಗಾರಿಕೆ, ಲಲಿತಕಲೆಗಳಲ್ಲಿ ತೊಡಗಿಸಿಕೊಳ್ಳಬೇಕು, ಜೀವನದಲ್ಲಿ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಪ್ರಯತ್ನಿಸಬೇಕು, ತೀವ್ರ ಮತ್ತು ಅಜಾಗರೂಕತೆಯು ವ್ಯಕ್ತಿಯನ್ನು ಬೇಜವಾಬ್ದಾರಿಯನ್ನಾಗಿ ಮಾಡುತ್ತದೆ, ಆದ್ದರಿಂದ ಜೀವನದಲ್ಲಿ ಕಲೆಯನ್ನು ತೊಡಗಿಸಿಕೊಳ್ಳುವ ಮೂಲಕ ಯಶಸ್ವಿ ಮತ್ತು ಆರೋಗ್ಯಕರ ಜೀವನವನ್ನು ನಡೆಸುವಂತಾಗಲಿ ಎಂದು ಹೇಳಿದರು.

ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಮುಖ್ಯಸ್ಥರಾದ ಡಾ. ರಾಮಕೃಷ್ಣ ಎನ್. ಹೆಗಡೆ ಯವರು ಸ್ವಾಗತ ಭಾಷಣವನ್ನು ಮಾಡಿದರು. ಪ್ರೊ. ಕೆ. ಶ್ರೀನಾಥ್ ರಾವ್ ರವರು ಇಬ್ಬರು ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.  

ಕಲಾಸ್ಪಂದನ ಕಾರ್ಯಕ್ರಮದ ಸಂಚಾಲಕರಾದ ಡಾ. ಶ್ವೇತಾ ಪೈ ಯವರು ಕಾರ್ಯಕ್ರಮದ ಹಿನ್ನಲೆ ಹಾಗೂ ಕಲಾಸ್ಪಂದನ ಕಾರ್ಯಕ್ರಮದ ಅಂಗವಾಗಿ ಕಳೆದ ಎರಡು ವಾರಗಳಿಂದ ಮಹಿಳಾ ಸಬಲೀಕರಣ ಪರಿಕಲ್ಪನೆಯಲ್ಲಿ ಕಾಲೇಜಿನಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧಾ ಚಟುವಟಿಕೆಗಳ ಮಾಹಿತಿಯನ್ನು ಸಭೆಗೆ ನೀಡಿದರು, ಹಾಗೂ ವಿಜೇತರ ಹೆಸರನ್ನು ಸಭೆಗೆ ತಿಳಿಸಿದರು.

ಡಾ. ಆಶಾ ಸರಸ್ವತಿ ಯವರು ವಂದನಾರ್ಪಣೆ ಸಲ್ಲಿಸಿದರು.‌ ಫೆಲಿಷಿಯಾ ಸಿಕ್ವೆರಾ ಕಾರ್ಯಕ್ರಮ ನಿರೂಪಿಸಿದರು.
ಸುಮಂತ್ ಭಟ್ ಪ್ರಾರ್ಥನೆಯನ್ನು ಮಾಡಿದರು. ಶ್ರೀನಿವಾಸ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕರಾದ ಡಾ. ಪ್ರವೀಣ್ ಬಿ.ಎಂ., ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಹೆಲ್ತ್ ಫೆಸ್ಟ್ (ಆರೋಗ್ಯ ಉತ್ಸವ) ಕಾರ್ಯಕ್ರಮವನ್ನು ಆಯೋಜಿಸಲಾಯಿತು. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ವಿವಿಧ ಪಿಯು ಕಾಲೇಜುಗಳ ವಿದ್ಯಾರ್ಥಿಗಳು ಆರೋಗ್ಯ ಉತ್ಸವದಲ್ಲಿ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ, ನಾರಿ ಶಕ್ತಿ ಆಧಾರಿತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಪರ್ವ” ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.  

RELATED ARTICLES
- Advertisment -
Google search engine

Most Popular