ಉಡುಪಿ: ಇತ್ತೀಚೆಗೆ ತೆರೆಕಂಡ ಕಲ್ಜಿಗ ಸಿನೆಮಾದಲ್ಲಿ ಬರುವ ಕೊರಗಜ್ಜ ನೇಮ ದೃಶ್ಯಕ್ಕೆ ಕತ್ತರಿ ಹಾಕುವಂತೆ ಮತ್ತು ಈ ದೃಶ್ಯದಿಂದ ದೈವಾರಾಧನೆ ಪದ್ಧತಿಗೆ ಚ್ಯುತಿಯಾಗಿದೆ ಎಂದು ತುಳುನಾಡ ದೈವಾರಾಧನೆ ಸಂರಕ್ಷಣೆ ವೇದಿಕೆ ಆರೋಪಿಸಿದೆ. ಈ ಬಗ್ಗೆ ಮಾತನಾಡಿ ವೇದಿಕೆಯ ಗೌರವಾಧ್ಯಕ್ಷ ದಿಲ್‌ರಾಜ್ ಆಳ್ವ, ದೈವಾರಾಧನೆ ತುಳುವ ಮಣ್ಣಿನ ಅಸ್ಮಿತೆ ಮತ್ತು ದೈವಗಳು ನಮ್ಮ ಮೂಲ ನಂಬಿಕೆಯಾಗಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ದೈವಾರಾಧನೆ ಮನೋರಂಜನೆ ಕ್ಷೇತ್ರದಿಂದ ಸಾಂಸ್ಕೃತಿಕ ಆಪತ್ತು ಎದುರಿಸುತ್ತಿದೆ. ಕಾಂತಾರದಿಂದ ಮೊದಲ್ಗೊಂಡು ನಾವು ಇದನ್ನು ಹೆಮ್ಮೆಪಟ್ಟೆವು. ಆನಂತರ ಬೆಂಗಳೂರು, ಮೈಸೂರಿನಲ್ಲಿ ದೈವಗಳ ಪ್ರತಿಷ್ಠಾಪನೆ, ನೇಮ ಎಂಬ ಸಂಘಟನೆಗಳು ನಡೆಯಲು ಆರಂಭಗೊಂಡಿತು. ನಂತರ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂಬ ನೆಲೆಯಲ್ಲಿ ವೇದಿಕೆ ವತಿಯಿಂದ ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ. ಕಲ್ಜಿಗ ಸಿನೆಮಾಗೆ ಸಂಬಂಧಿಸಿ ನಾವು ವೈಯಕ್ತಿಕ ಟೀಕೆ ಮಾಡುತ್ತಿಲ್ಲ. ತುಳು ಸಿನೆಮಾ ಎಲ್ಲರೂ ನೋಡಬೇಕು, ಯಶಸ್ವಿಯಾಗಬೇಕು. ಆದರೆ ದೈವಾರಾಧನೆ ದೃಶ್ಯ ತೆಗೆಯಬೇಕು ಎಂದು ಅವರು ಹೇಳಿದರು.
ವೇದಿಕೆ ಸದಸ್ಯೆ ಸಹನಾ ಕುಂದರ್ ಸೂಡ, ಮಂಗಳೂರು ಜಿಲ್ಲಾಧ್ಯಕ್ಷ ಭರತ್ ರಾಜ್, ಗಿರೀಶ್ ಉಪಸ್ಥಿತರಿದ್ದರು.