ಮಂಗಳೂರು: ಕನಕದಾಸರು ಕೇವಲ ಹರಿದಾಸರಷ್ಟೇ ಅಲ್ಲ. ಕವಿ, ಸಮಾಜ ಸುಧಾರಕ ಹೀಗೆ ಹಲವು ವ್ಯಕ್ತಿತ್ವಗಳು ಅವರಲ್ಲಿ ಸಮಾಗಮಗೊಂಡಿದೆ. ಕನಕದಾಸರನ್ನು ಕೇಂದ್ರವಾಗಿಟ್ಟುಕೊಂಡು ಮಧ್ಯಕಾಲದ ಭಕ್ತಿ ಪರಂಪರೆಯ ಬಗೆಗೆ ಅಧ್ಯಯನ ಮತ್ತು ಹೊಸತಲೆಮಾರಿಗೆ ಅರಿವನ್ನು ಮೂಡಿಸುವ ಉದ್ದೇಶದಿಂದ ಕರ್ನಾಟಕ ಸರಕಾರದ ಸಂಸ್ಕೃತಿ ಇಲಾಖೆಯು ಬೆಂಗಳೂರಿನಲ್ಲಿ ರಾಷ್ಟ್ರೀಯ ಸಂತಕವಿ ಕನಕ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ಅಧ್ಯಕ್ಷ ಕಾ.ತ ಚಿಕ್ಕಣ್ಣ ಹೇಳಿದರು.
ಅವರು ಬುಧವಾರ ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನ ಕೇಂದ್ರವು ತುಳು ಸಾಹಿತ್ಯ ಅಕಾಡೆಮಿಯ ಸಭಾಭವನದಲ್ಲಿ ‘ ಕನಕದಾಸ ಮತ್ತು ತತ್ತ್ವಪದಕಾರರ ಅಧ್ಯಯನ ಮುನ್ನೋಟ ಎಂಬ ವಿದ್ವಾಂಸರೊಂದಿಗಿನ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಂದ್ರದ ಚಟುವಟಿಕೆಗಳನ್ನು ವಿಸ್ತರಿಸಿ ತತ್ತ್ವಪದ, ದಾಸ ಸಾಹಿತ್ಯ, ಕರ್ನಾಟಕದ ಭಕ್ತಿಪರಂಪರೆಗಳನ್ನೂ ಒಳಗೊಂಡಂತೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.ಅದಕ್ಕೆ ಪೂರ್ವಭಾವಿಯಾಗಿ ಮೈಸೂರು, ಬೆಂಗಳೂರು, ಮಂಗಳೂರು, ಬೆಳಗಾವಿ, ರಾಯಚೂರುಗಳಲ್ಲಿ ವಿದ್ವಾಂಸರೊಂದಿಗೆ ಸಮಾಲೋಚನ ಗೋಷ್ಠಿಯನ್ನು ನಡೆಸಿ ರೂಪುರೇಷೆ ತಯಾರಿಸಲಾಗುತ್ತಿದೆ ಎಂದರು.
ಸಮಾಲೋಚನ ಸಭೆಯಲ್ಲಿ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ. ಕೆ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನ್ಲಿ ಅಲ್ವರಿಸ್, ತುಳು ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ, ಮಂಗಳೂರು ವಿವಿ ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ, ಉಡುಪಿ ಕನಕದಾಸ ಅಧ್ಯಯನ ಕೇಂದ್ರದ ಡಾ.ಜಗದೀಶ್ ಶೆಟ್ಟಿ, ಹಿರಿಯ ವಿದ್ವಾಂಸರಾದ ಪ್ರೊ.ಎ ವಿ ನಾವಡ, ಡಾ.ಶಿವರಾಮ ಶೆಟ್ಟಿ, ಪ್ರೊ. ಎ.ಎಸ್ ಕೃಷ್ಣಯ್ಯ ಉಡುಪಿ, ಡಾ.ಉದಯಕುಮಾರ್ ಇರ್ವತ್ತೂರು, ಪ್ರೊ.ಕೃಷ್ಣಮೂರ್ತಿ ಸುರತ್ಕಲ್, ಡಾ.ಮೀನಾಕ್ಷಿ ರಾಮಚಂದ್ರ, ಬೈಕಾಡಿ,ರೂಪಕಲಾ ಆಳ್ವ, ಡಾ.ಜ್ಯೋತಿ ಚೇಳ್ಯಾರ್, ಡಾ. ವಾಸುದೇವ ಬೆಳ್ಳೆ, ಬೆನೆಟ್ ಅಮ್ಮಣ್ಣ, ಡಾ.ಜಯಪ್ರಕಾಶ್ ಶೆಟ್ಟಿ, ಪ್ರೊ.ಅಕ್ಷಯ ಶೆಟ್ಟಿ, ಡಾ.ವಿಜಯಕುಮಾರ್ ಮೊಳೆಯಾರ, ಡಾ. ಸಂಪೂರ್ಣಾನಂದ ಬಳ್ಕೂರು ಮತ್ತಿತರರು ಭಾಗವಹಿಸಿದ್ದರು.
ಬೆಂಗಳೂರು ಕನಕದಾಸ ಕೇಂದ್ರದ ಕಾರ್ಯಾನುಷ್ಠಾನ ಮಂಡಳಿಯ ನಾಮನಿರ್ದೇಶಿತ ಸದಸ್ಯೆ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಸ್ವಾಗತಿಸಿ, ವಂದಿಸಿದರು.
ಸಭೆಯಲ್ಲಿ ಕರಾವಳಿಯಲ್ಲಿರುವ ಭಜನಾ ಸಾಹಿತ್ಯ ಪರಂಪರೆಯ ಕುರಿತು ಅಧ್ಯಯನ ಮತ್ತು ಪ್ರಕಟಣೆ, ಸ್ಥಳೀಯ ಭಕ್ತಿ ಪರಂಪರೆಯ ಹಲವು ಧಾರೆಗಳ ಪರಿಚಯ ಕೃತಿ ಪ್ರಕಟಣೆ, ತತ್ತ್ವ ಪದಕಾರರ ಕುರಿತು ಪುಸ್ತಿಕೆಗಳ ಪ್ರಕಟಣೆ, ಶಾಲಾ ಮಕ್ಕಳಿಗೆ ಕನಕದಾಸರನ್ನು ಪರಿಚಯಿಸುವ ಕಾರ್ಯಕ್ರಮಗಳ ಸಂಯೋಜನೆ, ಕರ್ನಾಟಕದ ಇತರೆ ಭಾಗದ ಭಕ್ತಿ ಪರಂಪರೆಯನ್ನು ಕರಾವಳಿಗೆ ಪರಿಚಯಿಸುವ ಕಾರ್ಯಕ್ರಮ ಇತ್ಯಾದಿಗಳಿಗೆ ಒತ್ತು ಕೊಡಬೇಕೆಂಬ ಸೂಚನೆಗಳನ್ನು ವಿದ್ವಾಂಸರು ನೀಡಿದರು