ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರು ವಿದೇಶದಲ್ಲಿ ಕನ್ನಡ ಕಲರವವನ್ನು ಹಂಚುವ ತಮ್ಮ ಯೋಜನೆಯ ಅಂಗವಾಗಿ ಯುರೋಪ್ ಪ್ರವಾಸದಲ್ಲಿದ್ದಾರೆ. ಇದರ ಅಂಗವಾಗಿ ಅವರು ಸ್ಪೇನ್ ದೇಶದ ವಾಣಿಜ್ಯ ನಗರಿ ಬಾರ್ಸಿಲೋನಾದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಎರಡೂ ಸಂಭ್ರಮಾಚರಣೆಗಳು ಸೇರಿದ “ದೀಪೋತ್ಸವ” ಎನ್ನುವ ವಿಶಿಷ್ಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಬಾರ್ಸಿಲೋನಾದಲ್ಲಿರುವ ಭಾರತದ ಕೌನ್ಸಿಲ್ ಜನರಲ್ ಇಭಾಸ್ಕರ್ ಸುಂದರಮೂರ್ತಿ ಮತ್ತು ಸ್ಪೇನ್ ದೇಶದ ಸೆನೆಟರ್ ಆಗಿರುವ ಭಾರತ ಮೂಲದ ರಾಬರ್ಟ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಾಡೋಜ ಡಾ. ಮಹೇಶ್ ಜೋಶಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಮಹತ್ವವನ್ನು ಒತ್ತಿ ಹೇಳಿ ಮಂಡ್ಯದಲ್ಲಿ ಆಯೋಜನೆ ಗೊಂಡಿರುವ 87 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲರನ್ನು ಆಹ್ವಾನಿಸಿದರು.
ವಿದೇಶದಲ್ಲಿರುವ ಕನ್ನಡಿಗರನ್ನೂ ಒಳಗೊಳ್ಳುವ ಪ್ರಯತ್ನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಇದೇ ಮೊಟ್ಟಮೊದಲ ಬಾರಿಗೆ ಮಾಡುತ್ತಿದ್ದಾರೆ ಎಂಬ ಮೆಚ್ಚುಗೆಯನ್ನು ಅಲ್ಲಿಯ ಎಲ್ಲರೂ ವ್ಯಕ್ತಪಡಿಸಿದರು.
ಸ್ಪೇನ್ ಕನ್ನಡ ಕೂಟ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉತ್ಸುಕವಾಗಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಬಂದಿರುವ ಕಾರಣಕ್ಕೆ ತಾವು ಕಾರ್ಯಕ್ರಮಕ್ಕೆ ಬಂದಿರುವುದಾಗಿ ಬಾರ್ಸಿಲೋನಾದಲ್ಲಿರುವ ಭಾರತದ ಕೌನ್ಸಿಲ್ ಜನರಲ್ ಇಭಾಸ್ಕರ್ ಸುಂದರಮೂರ್ತಿ ಹೇಳಿ ಹೊಸದಾಗಿ ರೂಪುಗೊಳ್ಳುತ್ತಿರುವ ಭಾರತ ರಾಯಭಾರ ಕಚೇರಿಯಲ್ಲಿ ಕನ್ನಡ ತರಗತಿ ನಡೆಸಲು ಜಾಗದ ಜೊತೆಗೆ ಎಲ್ಲ ಮೂಲ ಸೌಕರ್ಯವನ್ನು ಸಹಾ ಒದಗಿಸುವುದಾಗಿಯೂ ತಿಳಿಸಿದರು. ಈ ಆಹ್ವಾನವನ್ನು ಒಪ್ಪಿಕೊಂಡ ನಾಡೋಜ ಡಾ. ಮಹೇಶ್ ಜೋಶಿ ಅವರು ಸ್ಪೇನ್ ಕನ್ನಡ ಕೂಟ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಒಟ್ಟಾಗಿ ಕನ್ನಡ ತರಗತಿಗಳನ್ನು ನಡೆಸುವುದಾಗಿ ಹೇಳಿದರು. ಸ್ಪೇನ್ ನಲ್ಲಿನ ಕನ್ನಡಿಗರನ್ನು ಒಟ್ಟುಗೂಡಿಸುವ ರಚನಾತ್ಮಕ ಕ್ರಮಗಳ ಕುರಿತು ಅವರು ಮಾತನಾಡಿದರು.
ಪುನೀತ್ ರಾಜಕುಮಾರ್ ಅವರ ಪವರ್ ಚಲನಚಿತ್ರ ಚಿತ್ರೀಕರಣಗೊಂಡ ಸ್ಥಳದಲ್ಲಿ ನಾಡೋಜ ಡಾ. ಮಹೇಶ್ ಜೋಶಿ ಅವರು ಪುನೀತ್ ಅವರನ್ನು ಸ್ಮರಿಸಿ ಗೌರವವನ್ನು ಅರ್ಪಿಸಿದರು.
ಸ್ಪೇನ್ ದೇಶದಲ್ಲಿ ಕನ್ನಡ ಕಲರವ ಹರಡುವ ನಾಡೋಜ ಡಾ.ಮಹೇಶ ಜೋಶಿಯವರ ಯತ್ನ ಸಫಲವಾಗಿರುವುದಕ್ಕೆ ಸ್ಪೇನ್ ಕನ್ನಡ ಕೂಟ ದ ಅಧ್ಯಕ್ಷ ಭರತ್ ಅನಂತರಾಮ್, ಖಜಾಂಚಿ ಸುಹಾಸ್ ಲಕ್ಷ್ಮಿಕಾಂತಯ್ಯ, ಉತ್ಸಾಹಿ ಬಸಂತ್ ಕುಮಾರ್ ಕಲಬುರ್ಗಿ ಅವರನ್ನು ಒಳಗೊಂಡಂತೆ, ಅಲ್ಲಿ ಸೇರಿದ್ದ ದೊಡ್ಡ ಸಂಖ್ಯೆಯ ಕನ್ನಡಿಗರೇ ಸಾಕ್ಷಿಯಾಗಿದ್ದರು. ಡಾ ಮುರಳಿ ಮೋಹನ್ ಚೂನಂತಾರೂ ಉಪಸ್ಥಿತರಿದ್ದರು
ಎನ್ ಎಸ್ ಶ್ರೀಧರಮೂರ್ತಿ
ಸಂಚಾಲಕರು
ಪ್ರಕಟಣಾ ವಿಭಾಗ
ಕನ್ನಡ ಸಾಹಿತ್ಯ ಪರಿಷತ್ತು