ಕೋಲಾರ : ಕನ್ನಡವು ಕೇವಲ ಭಾಷೆಯಲ್ಲ, ಅದು ನಮ್ಮೆಲ್ಲರ ಶಕ್ತಿ ಎಂದು ಮುಖ್ಯ ಶಿಕ್ಷಕಿಯಾದ ಬಿ.ಎಂ.ಪುಷ್ಪಲತಾರವರು ಮಾತನಾಡಿದರು.
ನಗರದ ಅಣ್ಣಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ಕನ್ನಡಿಗರಾದ ನಾವು ಬೇರೆ ಭಾಷೆಯಲ್ಲಿ ಶಿಕ್ಷಣವನ್ನು ಪಡೆದರೂ ಸಾಮರ್ಥ್ಯವನ್ನು ಗಳಿಸಿದ ನಂತರ ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಆಗ ಮಾತ್ರ ಕನ್ನಡ ಉಳಿಸಲು ಸಾಧ್ಯವಾಗುತ್ತದೆ ಎಂದರು.
ಕನ್ನಡ ಭಾಷಾ ಶಿಕ್ಷಕಿರಾದ ಎಂ.ಎನ್.ಉಮಾದೇವಿ ಮಾತನಾಡಿ, ಕರ್ನಾಟಕಕ್ಕೆ ಎಷ್ಟೋ ಸಾವಿರ ವರ್ಷಗಳ ಇತಿಹಾಸವಿದೆ. ಅತ್ಯಂತ ವೈವಿಧ್ಯಮಯ ಮತ್ತು ವಿವಿಧವಾದ ಸಂಸ್ಕೃತಿಯನ್ನು ಹೊಂದಿರುವಂತಹ ಈ ನಾಡಲ್ಲಿ ನಾವಿರುವುದಕ್ಕೆ ನಿಜವಾಗಿಯೂ ಹೆಮ್ಮೆ ಪಡಲೇಬೇಕು. ಈ ನಾಡನ್ನು ಇನ್ನಷ್ಟು ಇನ್ನಷ್ಟು ಅಭಿವೃದ್ಧಿಪಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.
ಕಲಾ ವಿಭಾಗದ ಎಸ್.ಲತಾ ಮಾತನಾಡಿ, ಕನ್ನಡ ಭಾಷೆಯು ಭಾರತದ ಪ್ರಾಚೀನ ಭಾಷೆಗಳಲ್ಲಿ ಒಂದಾದರೆ, ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನ ಪಡೆದಂತಹ ರಾಜ್ಯ ನಮ್ಮ ಕರ್ನಾಟಕ. ಇಂತಹ ನಾಡಿಗಾಗಿ ಹಲವಾರು ನಾಯಕರುಗಳು ಸಮಿತಿಗಳನ್ನು, ಸಂಘಗಳನ್ನು, ಸಂಘಟನೆಗಳನ್ನು ಕಟ್ಟಿಕೊಂಡು ಹೋರಾಡಿದ ಅವರ ಬೆವರ ಹನಿಯ ಪ್ರತಿಫಲದಿಂದ ಕನ್ನಡ ನಾಡು ಉದಯವಾಗಿದೆ ಎಂದು ತಿಳಿಸಿದರು.
ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡು ನುಡಿಯ ಕುರಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಕಲ್ಪಲತಾ, ಸುಬ್ರಮಣಿ.ವಿ.ಎನ್, ಲೋಕೇಶ್ ಮಂಜುಳಾ.ಎಸ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.