ಉಡುಪಿ,: ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಉಳಿಯಾರಗೋಳಿ ಗ್ರಾಮದ ಕೊತ್ತಲಕಟ್ಟೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನ.30ರಂದು ಸಂಜೆ ವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗೂಡ್ಸ್ ಟೆಂಪೋದಲ್ಲಿದ್ದ ಐವರು ಉತ್ತರ ಭಾರತದ ಕಾರ್ಮಿಕರು ಮೃತಪಟ್ಟು, 7 ಮಂದಿ ತೀವ್ರವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಮದುವೆ ಸಮಾರಂಭಗಳಿಗೆ ಡೆಕರೋಷನ್ ಸಂಬಂಧಿಸಿದ ಕಬ್ಬಿಣದ ಸಲಕರಣೆಗಳನ್ನು ಸಾಗಿಸುತ್ತಿದ್ದ 407 ಗೂಡ್ಸ್ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿ ಪಲ್ಟಿಯಾಗಿ ಬಿದ್ದು ಈ ಅಪಘಾತ ಸಂಭವಿಸಿದೆ. ಮೃತರನ್ನು ಅಸ್ಸಾಂ ರಾಜ್ಯದ ಪಪ್ಪು ರವಿದಾಸ್(28), ಹರೀಶ್(27), ತ್ರಿಪುರಾದ ಗಪುನಾಥ್(50), ಪಶ್ಚಿಮ ಬಂಗಾಳ ರಾಜ್ಯದ ಕಮಲ್, ಸಮರೇಶ್ ಎಂದು ಗುರುತಿಸಲಾಗಿದೆ. ಗಾಯಾಳುಗಳಾದ ಚಾಲಕ ಕೊತಲ್‌ಕಟ್ಟೆಯ ರಂಜಿತ್ ಅಮೀನ್(33), ಅಸ್ಸಾಂ ರಾಜ್ಯದ ಗಣೇಶ್ ಬಹುದ್ದೂರು ರಾಯ್(36), ಪಶ್ಚಿಮ ಬಂಗಾಳದ ಪ್ರಭಾ ರಾಯ್(26), ಗೋಪಾಲ ಬೌಮಿಕ್(16), ಸೂರಜ್ ದೊಲಾಯಿ(16), ಸುಬ್ರಾದೋ(20) ಎಂಬವರು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಕಾಪು ಪೊಲೀಸ್ ಠಾಣಾಧಿಕಾರಿ ತೇಜಸ್ವಿನಿ, ಪಡುಬಿದ್ರಿ ಠಾಣಾ ಎಸ್ಟ್ ಸಕ್ತಿವೇಲು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

