ಕಾಪು: ರಸ್ತೆ ದಾಟುತ್ತಿದ್ದ ದಂಪತಿಗೆ ಬಸ್ಸು ಡಿಕ್ಕಿ ಹೊಡೆದು ಪತಿ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮೂಳೂರು ಮಂಗಳಪೇಟೆಯಲ್ಲಿ ನಡೆದಿದೆ. ಮಂಗಳೂರು ಉಡುಪಿ ರಸ್ತೆ ಬದಿಯಲ್ಲಿ ದ್ವಿಚಕ್ರ ವಾಹನವನ್ನು ನಿಲ್ಲಿಸಿ, ರಸ್ತೆ ಬದಿಯ ಹೋಟೆಲ್‌ಗೆ ತೆರಳುತ್ತಿದ್ದ ದಂಪತಿಗೆ ಬಸ್ಸೊಂದು ಡಿಕ್ಕಿ ಹೊಡೆದಿದೆ. ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ಬಸ್ಸು ದಂಪತಿಗೆ ಡಿಕ್ಕಿ ಹೊಡೆದಿದೆ. ಬಸ್ಸು ಡಿಕ್ಕಿ ಹೊಡೆದ ರಭಸಕ್ಕೆ ಕಾಪು ಕಲ್ಯ ಭಾರತ್ ನಗರ ನಿವಾಸಿ ಹಿದಾಯತುಲ್ಲಾ (57) ಮೃತಪಟ್ಟಿದ್ದಾರೆ. ಅವರ ಪತ್ನಿ ಶಾವರ್‌ಗೆ ಗಂಭೀರ ಗಾಯಗಳಾಗಿವೆ. ಸ್ಥಳೀಯರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ಹಿದಾಯತ್ ಸಾವನ್ನಪ್ಪಿದ್ದರು.
ಬಸ್ಸನ್ನು ಸ್ಥಳದಲ್ಲೇ ಬಿಟ್ಟು ಬಸ್ಸು ಚಾಲಕ, ನಿರ್ವಾಹಕ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಸ್ಥಳೀಯರ ಸಹಕಾರದೊಂದಿಗೆ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಚ್ಚಿಲದ ಸಂಬಂಧಿಕರ ಮನೆಗೆ ತೆರಳಿದ್ದ ಅವರು ಅಲ್ಲಿಂದ ವಾಪಾಸು ಕಾಪುವಿಗೆ ಮರಳುವ ವೇಳೆ ಮೂಳೂರು ಹೋಟೆಲ್‌ನಿಂದ ಮನೆಗೆ ಪಾರ್ಸೆಲ್ ತರಲೆಂದು ರಸ್ತೆ ದಾಟುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.