ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಸಹಕಾರದಲ್ಲಿ ಕ್ಷೇತ್ರದ ಪ್ರಧಾನ ತಂತ್ರಿಗಳಾದ ವಿದ್ವಾನ್ ಶ್ರೀ ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ ವಿದ್ವಾನ್ ಕೆ.ಜಿ. ರಾಘವೇಂದ್ರ ತಂತ್ರಿವರ್ಯರು ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯಲ್ಲಿ ಪ್ರಾರ್ಥಿಸುವ ಮೂಲಕ ಮಂಗಳವಾರ ಬೆಳಿಗ್ಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಿದರು. ಅಮ್ಮನ ಭವ್ಯ ಗರ್ಭಗುಡಿಯ ದಿವ್ಯ ಸಾನಿಧ್ಯದಲ್ಲಿ ಕೋಣಗಳಿಂದ ಉಳುಮೆ ಮಾಡುವ ಮೂಲಕ ನವ ಧಾನ್ಯಗಳ ಬಿತ್ತನೆ ಮಾಡಲಾಯಿತು. ಗಣ್ಯರು, ದಾನಿಗಳು, ಭಕ್ತರ ಸಮ್ಮುಖದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ರಾಜಗೋಪುರ, ಭೋಜನ ಶಾಲೆ ಹಾಗೂ ಸುಸಜ್ಜಿತ ಶೌಚಾಲಯಕ್ಕೆ ಭೂಮಿ ಪೂಜೆ ನೆರವೇರಿಸುವ ಮೂಲಕ ಶಂಕು ಸ್ಥಾಪನೆ ಮಾಡಲಾಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯನ್ನು ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು. ಈ ಸಂದರ್ಭ ವಾಸ್ತು ತಜ್ಞ ವಿದ್ವಾನ್ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಮಾತನಾಡಿ ದೇವಸ್ಥಾನ ನಿರ್ಮಾಣ ಕಷ್ಟಕರ ಆದರೆ ಕಷ್ಟದಲ್ಲಿ ಸುಖ, ಸಾರ್ಥಕ್ಯ ಇದೆ. ಶಾಸ್ತ್ರದ ಪ್ರಕಾರ ಊರು ದೇವಸ್ಥಾನ ಕಟ್ಟಬೇಕು. ಅದರ ಫಲ ದೇವಸ್ಥಾನ ಊರನ್ನು ಕಟ್ಟುತ್ತದೆ ಎಂದಿದೆ. ಹಣವಿದ್ದರೆ ದೇವಸ್ಥಾನವಾಗದು, ಇಚ್ಚಾ ಶಕ್ತಿಯು ಅಗತ್ಯ, ಕಾಪುವಿನ ಶ್ರೀ ಮಾರಿಯಮ್ಮ ಯುದ್ಧ ದೇವತೆ, ಕರಾವಳಿಯಲ್ಲಿ ರಕ್ಷಣೆಗಾಗಿ ಸೈನ್ಯದ ನೆಲೆಯ ಭಾಗವಾದ ದೇವತೆ ಶ್ರೀ ಮಾರಿಯಮ್ಮ. ಕಾಪು ಸುತ್ತಮುತ್ತಲ ಸುಮಾರು ಐದು-ಆರು ಕಿಲೋ ಮೀಟರ್ ಕುಂಕುಮ ವರ್ಣ ಅಥವಾ ರಕ್ತವರ್ಣದ ಮಣ್ಣನ್ನು ಕಾಣಬಹುದು. ಇದು ಮಾರಿಯಮ್ಮ ಇರುವ ಸಂಕೇತ ಎಂದು ಹೇಳಿದರು. ಎಂ ಆರ್ ಜಿ ಗ್ರೂಪ್ ಬೆಂಗಳೂರು ಇದರ ಆಡಳಿತ ನಿರ್ದೇಶಕ ಪ್ರಕಾಶ್ ಶೆಟ್ಟಿ ಮಾತನಾಡಿ ಕಾಪು ಮಾರಿಯಮ್ಮನ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ಸಿಕ್ಕಿರುವುದು ಸೌಭಾಗ್ಯ. ವಿವಿಧ ಧಾರ್ಮಿಕ ಕಾರ್ಯಗಳು ನಡೆದಿದೆ. ಮುಂದೆಯೂ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುತ್ತೇನೆ ಎಂದರು.
ಕ್ಷೇತ್ರದ ಪ್ರಧಾನ ತಂತ್ರಿ ವಿದ್ವಾನ್ ಕುಮಾರಗುರು ಕ್ಷೇತ್ರದಲ್ಲಿ ನಡೆದ ಧಾರ್ಮಿಕ ವಿಧಿ ವಿಧಾನಗಳಾದ ಭೂಕರ್ಷಣ ಖನನ, ಹರಣ, ದಾಹ, ಪೂರಣ, ಬೀಜ ವಪನಗಳ ಜೊತೆಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವವನ್ನು 2025 ರ ಮಾರ್ಚ್ 2ರಂದು ನಡೆಸಲಾಗುವುದು ಎಂದು ಘೋಷಿಸಿದರು. ಈ ಸಂದರ್ಭ ಶಂಖನಾದ ಮೊಳಗಿಸಲಾಯಿತು. ಇದೇ ಸಂದರ್ಭ ಕ್ಷೇತ್ರದ ಬಗೆಗಿನ ಆಲ್ಬಂ ಗೀತೆಯನ್ನು ಲೋಕಾರ್ಪಣೆ ಮಾಡಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ ವಹಿಸಿದ್ದರು.ಈ ಸಂದರ್ಭ ವೀರಶೈವ ಸಮುದಾಯದ ಸ್ವಾಮಿಗಳಾದ ಶ್ರೀ ರುದ್ರಮುನಿ ಸ್ವಾಮಿಗಳು ಜಂಗಮ ಸಂಸ್ಥಾನ ಮಠ ಗುರುಪುರ, ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಅದಾನಿ ಮತ್ತು ಯುಪಿಸಿಎಲ್ ನಂದಿಕೂರು ಜಂಟಿ ಅಧ್ಯಕ್ಷ ಕಿಶೋರ್ ಆಳ್ವ, ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ನವೀನ್ ಚಂದ್ರ ಶೆಟ್ಟಿ, ಕಾಪು ಶ್ರೀ ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶೇಖರ್ ಆಚಾರ್ಯ, ಕಾಪು ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಯಕರ ಶೆಟ್ಟಿಗಾರ್, ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕರಾದ ಉದಯ ಸುಂದರ್ ಶೆಟ್ಟಿ, ಕಟ್ಟಡ ಸಮಿತಿಯ ಪ್ರಧಾನ ಸಂಚಾಲಕರಾದ ಭಗವಾನ್ ದಾಸ್ ಶೆಟ್ಟಿಗಾರ್, ಉದ್ಯಮಿಗಳಾದ ಆನಂದ್ ಎಂ ಶೆಟ್ಟಿ, ರವಿ ಸುಂದರ ಶೆಟ್ಟಿ, ರಂಜನಿ ಸುಧಾಕರ್ ಹೆಗ್ಡೆ, ಸುಜಾತ್ ಶೆಟ್ಟಿ, ಮೊಗವೀರ ಮಹಾಸಭಾದ ಅಧ್ಯಕ್ಷ ಜಯ ಸಿ ಕೋಟ್ಯಾನ್, ವಿದ್ವಾನ್ ಕೆ.ಜಿ. ರಾಘವೇಂದ್ರ ತಂತ್ರಿ, ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ, ದೇವಳದ ಪ್ರಧಾನ ಅರ್ಚಕ ವೇ.ಮೂ. ಕೆ. ಶ್ರೀನಿವಾಸ ತಂತ್ರಿ, ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ್ ಶೆಟ್ಟಿ, ಮುಂಬೈ ಉಚ್ಚ ನ್ಯಾಯಾಲಯದ ನ್ಯಾಯವಾದಿ ಮಹೇಶ್ ಕೋಟ್ಯಾನ್, ಅಭಿವೃದ್ಧಿ ಸಮಿತಿಯ ಆಫ್ರಿಕಾ ಘಟಕದ ಅಧ್ಯಕ್ಷ ಮಹೇಶ್ ಕುಮಾರ್,ಯೋಗೀಶ್ ಶೆಟ್ಟಿ ಬಾಲಾಜಿ, ರಮೇಶ್ ಹೆಗ್ಡೆ, ಕಾಪು ದಿವಾಕರ್ ಶೆಟ್ಟಿ, ಮಾಧವ ಪಾಲನ್, ಡಾ. ದೇವಿ ಪ್ರಸಾದ್ ಶೆಟ್ಟಿ, ಮನೋಹರ್ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್ ಮತ್ತಿತರರು ಉಪಸ್ಥಿತರಿದ್ದರು. ರೇಣುಕಾ ಜೋಗಿ ಪ್ರಾರ್ಥಿಸಿದರು. ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸತೀಶ್ ಶೆಟ್ಟಿ ಗುಡ್ಡೆಚ್ಚಿ ನಿರೂಪಿಸಿದರು. ಸಮಿತಿ ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ ವಂದಿಸಿದರು.