ಕಾಪು: ಇಲ್ಲಿನ ಕಳತ್ತೂರು ಗ್ರಾಮದ ಪೈಯಾರು ಶ್ರೀ ಮಾಸ್ತಿಅಮ್ಮ ದೇವಸ್ಥಾನದಲ್ಲಿ ಮೇ 2 ಮತ್ತು 3ರಂದು ಶ್ರೀ ದೇವರ ನವೀಕೃತ ಶಿಲಾಮಯ ಗರ್ಭಗೃಹ ಸಮರ್ಪಣೋತ್ಸವ ಮತ್ತು ಸಪರಿವಾರ ದೈವಗಳ ಪುನಃಪ್ರತಿಷ್ಠೆ ಮಹೋತ್ಸವ ನಡೆಯಲಿದೆ. ಕಳತ್ತೂರು ಉದಯ ತಂತ್ರಿಯವರ ನೇತೃತ್ವದಲ್ಲಿ ಈ ಎಲ್ಲಾ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಮೇ 2ರಂದು ಸಂಜೆ 4ರಿಂದ ಶಿಲ್ಪಿಯಿಂದ ಪ್ರಾಸಾದ ಪರಿಗ್ರಹ, ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಪುಣ್ಯಹಃ ಸಪ್ತಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಬಲಿ ಮತ್ತು ಹೋಮ, ಶ್ರೀ ಮಾಸಿ ಅಮ್ಮನವರ ಅಧಿವಾಸ ಪ್ರಕಾರ ಬಲಿ ಕಾರ್ಯಕ್ರಮ ನಡೆಯಲಿದೆ. ಮೇ 3ರಂದು ಬೆಳಿಗ್ಗೆ 8ರಿಂದ ಪುಣ್ಯಾಹ ಕಲಶಾಧಿವಾಸ, ಪ್ರಧಾನ ಹೋಮ, ಶಿಖರ ಪ್ರತಿಷ್ಠೆ, ನೂತನ ಆಲಯದಲ್ಲಿ ಮಣೆಮಂಚಾವು ಹಾಗೂ ದೈವದ ಬಿಂಬವನ್ನು ಗರ್ಭಗೃಹ ಪ್ರವೇಶ ಮಾಡಿ ವರ್ತೆ ಪಂಜುರ್ಲಿ ದೈವ ಪ್ರತಿಷ್ಠೆ ಹಾಗೂ ಚೌಂಡಿ-ಗುಳಿಗ, ರಾವು ನೆಲೆಸುವುದು ನೆರವೇರಲಿದೆ. ಶ್ರೀ ಮಾಸ್ತಿ ಅಮ್ಮನವರ ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ಶ್ರೀ ದುರ್ಗಾ ಭಜನಾ ಮಂಡಳಿ, ವಿದ್ಯಾನಗರ, ಮುದರಂಗಡಿ ಮತ್ತು ಶ್ರೀ ವಾಸುದೇವ ಭಜನಾ ಮಂಡಳಿ, ಕೊಪ್ಪಲಂಗಡಿ ಕಾಪು ಇವರಿಂದ ಕುಣಿತ ಭಜನೆ ನಡೆಯಲಿದೆ. ಮೇ 2ರಂದು ಮಧ್ಯಾಹ್ನ 3 ಗಂಟೆಗೆ ಮಲ್ಲಾರು ಗುರು ನಾರಾಯಣ ಮಂದಿರದಿಂದ ಕ್ಷೇತ್ರದ ತನಕ ಬಿಂಬ, ಪ್ರಭಾವಳಿ ಹಾಗೂ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಮುದರಂಗಡಿಯ ಶ್ರೀ ದುರ್ಗಾ ಭಜನ ಮಂಡಳಿ ಮತ್ತು ಚಂದ್ರನಗರದ ಶ್ರೀ ರಾಮ ಭಜನಾ ಮಂಡಳಿಯ ವತಿಯಿಂದ ಭಜನೆ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಪುಣ್ಯ ಕಾರ್ಯಗಳಲ್ಲಿ ಭಾಗವಹಿಸಿ ಭಕ್ತರು ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಆಡಳಿತ ಮಂಡಳಿಯ ಪ್ರಕಟಣೆಯಲ್ಲಿ ಕೋರಲಾಗಿದೆ.