ಬಂಟ್ವಾಳ: ಇಲ್ಲಿನ ಕಾವಳಮೂಡೂರು ಗ್ರಾಮದ ಇತಿಹಾಸ ಪ್ರಸಿದ್ಧ ಮಹಾತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದ ತಡೆಗೋಡೆ ಸೆ.1ರಂದು ರಾತ್ರಿ ಕುಸಿದು ಬಿದ್ದ ಘಟನೆ ವರದಿಯಾಗಿದೆ. ದೇವಸ್ಥಾನದ ಹೊರಾಂಗಣದ ಎಡ ಬದಿಗೆ ಕಟ್ಟಲಾಗಿದ್ದ ಕಲ್ಲಿನ ತಡೆಗೋಡೆ ಕುಸಿದುಬಿದ್ದಿದೆ. ಮರುದಿನ ಬೆಳಿಗ್ಗೆ ದೇವಸ್ಥಾನ ಸಿಬ್ಬಂದಿ ಇದನ್ನು ಗಮನಿಸಿದ್ದಾರೆ. ಈ ಭಾಗದಲ್ಲಿ ವಾನರಗಳಿಗೆ ನೈವೇದ್ಯ ಅನ್ನ ಬಡಿಸಲಾಗುತ್ತಿತ್ತು. ತಡೆಗೋಡೆಯೊಂದಿಗೆ ಅಂಗಣದ ಇಂಟರ್‌ಲಾಕ್ ಕಿತ್ತು ಹೋಗಿದೆ.
ದೇವಸ್ಥಾನಕ್ಕೆ ಯಾವುದೇ ಹಾನಿಯಾಗಿಲ್ಲ. ಕುಸಿದ ಭಾಗದ ಕೆಳಭಾಗದಲ್ಲಿ ಕಲ್ಲು ಮಣ್ಣಿನ ದಿಬ್ಬವಿದೆ. ದೇವಸ್ಥಾನ ಬೃಹತ್ ಬಂಡೆಯ ಮೇಲೆ ಸ್ಥಾಪಿತವಾಗಿದೆ.
2020ರಲ್ಲೂ ದೇವಸ್ಥಾನದ ಎಡಭಾಗದ ತಡೆಗೋಡೆ ಕುಸಿತವಾಗಿತ್ತು. ಆಗ ದೇವಸ್ಥಾನದ ಸುತ್ತಮುತ್ತಲಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು. ಇದರಿಂದಾಗಿ ಕುಸಿತವಾಗಿರುವ ಸಾಧ್ಯತೆಯಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಹೀಗಾಗಿ ಗಣಿಗಾರಿಕೆ ಸ್ಥಗಿತಗೊಳಿಸಲಾಗಿತ್ತು. ಮತ್ತೆ ಇಲ್ಲಿ ಗಣಿಗಾರಿಕೆ ಆರಂಭವಾಗಿಲ್ಲ. ಆದರೂ ತಡೆಗೋಡೆ ಕುಸಿದಿದೆ. ತಜ್ಞರ ಪರಿಶೀಲನೆಯ ಬಳಿಕ ಕುಸಿತಕ್ಕೆ ಕಾರಣವೇನೆಂದು ತಿಳಿಯಬೇಕಿದೆ. ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು ಹೇಳಿದ್ದಾರೆ.