ಕಾರ್ಕಳ : ಶಿಲ್ಪಕಲೆ, ಧಾರ್ಮಿಕ, ಶೈಕ್ಷಣಿಕ, ಪ್ರವಾಸಿ ತಾಣವಾಗಿರುವ ಕಾರ್ಕಳಕ್ಕೆ ಬರುವ ಪ್ರವಾಸಿಗರನ್ನು ಸ್ವಾಗತಿಸಲು ಪುರಸಭೆ ಆಡಳಿತ ಹಾಕಿರುವ ಸ್ವಾಗತ ಕಮಾನುಗಳಲ್ಲಿ ಅಕ್ಷರಗಳು ಮಾಸಿ ಅಸ್ಪಷ್ಟ ಗೋಚರಿಸುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಸ್ವಾಗತ. ಕಮಾನುಗಳು ಇದೇ ರೀತಿಯಲ್ಲಿದ್ದರೂ ಸಂಬಂಧಪಟ್ಟವರು ಸರಿಪಡಿಸುವ ಗೋಜಿಗೆ ಹೋಗಿಲ್ಲ.
ಕರಿಯಕಲ್ಲಿನ ನಾಡು ಎಂದೇ ಪ್ರಸಿದ್ಧವಾಗಿರುವ ಕಾರ್ಕಳ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿಯತ್ತ ದಾಪುಗಾಲಿಟ್ಟಿದೆ. ಇಲ್ಲಿನ ಧಾರ್ಮಿಕ, ಶೈಕ್ಷಣಿಕ, ಪ್ರವಾಸಿ ಕೇಂದ್ರಗಳಿಗೆ ರಾಜ್ಯ ಮಾತ್ರವಲ್ಲದೇ ದೇಶದ ನಾನಾ ಭಾಗಗಳಿಂದ ಜನರು ಭೇಟಿ ನೀಡುತ್ತಿದ್ದಾರೆ. ಆದರೆ ಕಾರ್ಕಳ ನಗರವನ್ನು ಪ್ರವೇಶ ಮಾಡುವಾಗ ಸ್ವಾಗತ ನೀಡುವಂತಹ ಪುರಸಭಾ ಕಮಾನುಗಳಲ್ಲಿ ಅಕ್ಷರ ಮಾಸಿ ಹೋಗಿರುವುದು ಸಂಬಂದಪಟ್ಟವರ ಉದಾಸೀನ, ನಿರ್ಲಕ್ಷ್ಯಕ್ಕೆ ಸಾಕ್ಷಿ ಹೇಳುವಂತಿದೆ.
ಕಾರ್ಕಳದಲ್ಲಿ 2015ರಲ್ಲಿ ನಡೆದ ಗೊಮ್ಮಟೇಶ್ವರ ಮಹಾ ಮಸ್ತಕಾಭಿಷೇಕದ ಸಂದರ್ಭ ಸ್ವಾಗತ ಕಮಾನುಗಳನ್ನು ಅಳವಡಿಕೆ ಮಾಡಲಾಗಿತ್ತು. ಮಂಗಳೂರಿನಿಂದ ಕಾರ್ಕಳ ಪ್ರವೇಶ ನೀಡುವ ಬೈಪಾಸ್ ರಸ್ತೆಯಲ್ಲಿ ಮಂಗಳೂರಿನಿಂದ ಪಡುಬಿದ್ರೆಯಾಗಿ ಕಾರ್ಕಳ ಪ್ರವೇಶಿಸುವಾಗ ಬೈಪಾಸ್‌ನಲ್ಲಿ, ಉಡುಪಿಯಿಂದ ಕಾರ್ಕಳಕ್ಕೆ ಬರುವಾಗ ಜೋಡುರಸ್ತೆಯಲ್ಲಿ ಮತ್ತು ಬಜಗೋಳಿಯಿಂದ ಬರುವಾಗ ಕರಿಯಕಲ್ಲಿನಲ್ಲಿ ಕಾರ್ಕಳದ ಸ್ವಾಗತ ಕಮಾನುಗಳನ್ನು ಗಮನಿಸಬಹುದಾಗಿದೆ.
ಒಲ್ಲದ ಮನಸ್ಸಿನ ಸ್ವಾಗತ
ಮಂಗಳೂರಿನಿಂದ ಪಡುಬಿದ್ರೆಯಾಗಿ ಕಾರ್ಕಳ ಪ್ರವೇಶಿಸುವಾಗ ಬೈಪಾಸ್‌ನಲ್ಲಿರುವ ಬೋರ್ಡ್ ತಕ್ಕಮಟ್ಟಿಗೆ ಸರಿಯಾಗಿದೆ. ಮಂಗಳೂರಿನಿಂದ ಮೂಡುಬಿದ್ರೆಯಾಗಿ ಕಾರ್ಕಳ ಪ್ರವೇಶಿಸುವಾಗ ಬೈಪಾಸ್‌ನಲ್ಲಿರುವ ಬೋರ್ಡ್ ಮತ್ತು ಬಜಗೋಳಿಯಿಂದ ಬರುವಾಗ ಕರಿಯಕಲ್ಲಿನಲ್ಲಿರುವ ಬೋರ್ಡ್ ಸಂಪೂರ್ಣವಾಗಿ ಮಾಸಿ ಹೋಗಿದೆ. ಸುಂದರ ಅಕ್ಷರದೊಂದಿಗೆ ಸ್ವಾಗತಿಸಬೇಕಾದ ಬೋರ್ಡ್ ಹರಿದು ಹೋಗಿದ್ದು ಒಂದು ರೀತಿಯಲ್ಲಿ ಒಲ್ಲದ ಮನಸ್ಸಿನಲ್ಲಿ ಅತಿಥಿಗಳನ್ನು ಸ್ವಾಗತಿಸಿದಂತಹ ಅನುಭವ ನೀಡುತ್ತದೆ. ಇನ್ನು ಉಡುಪಿಯಿಂದ ಕಾರ್ಕಳ ಬರುವಾಗ ಜೋಡುರಸ್ತೆಯಲ್ಲಿದ್ದ ಬೋರ್ಡ್ ಮಾಯವಾಗಿದೆ. ಸುಮಾರು 5 ವರ್ಷಗಳ ಹಿಂದೆ ರಸ್ತೆ ಕಾಮಗಾರಿಯ ನಂತರ ತೆಗೆದ ಈ ಬೋರ್ಡ್‌ನ್ನು ಮತ್ತೆ ಅಳವಡಿಸುವ ಕಾರ್ಯ ನಡೆದೇ ಇಲ್ಲ.
ಶೋಭೆಯಲ್ಲ
ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಕಾರ್ಕಳಕ್ಕೆ ಪ್ರತಿನಿತ್ಯ ನೂರಾರು ಮಂದಿ ಆಗಮಿಸುತ್ತಾರೆ. ಈ ರಸ್ತೆಯಲ್ಲಿ ದಿನನಿತ್ಯ ಅದೆಷ್ಟು ಮಂದಿ ಓಡಾಡುತ್ತಾರೆ. ಇನ್ನು ಪ್ರತಿವರ್ಷ ಅತ್ತೂರು ಚರ್ಚ್ ಜಾತ್ರೆಗೆ ಸಾವಿರಾರು ಮಂದಿ ಆಗಮಿಸುತ್ತಾರೆ. ಅಲ್ಲದೆ ಆನೆಕೆರೆ ಬಸದಿ ಹಾಗೂ ಜೈನಮಠದ ಜೀರ್ಣೋದ್ದಾರ ಕಾರ್ಯ ನಡೆಯುತ್ತಿತ್ತು ಈಗಾಗಲೇ ಎಲ್ಲೆಂದರಿಂದ ಜನ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಅವರೆಲ್ಲರನ್ನು ಕಾರ್ಕಳಕ್ಕೆ ಸ್ವಾಗತಿಸುವ ಬೋರ್ಡ್ ಮಾಸಿ ಹೋಗಿರುವುದು ಬೆಳೆಯುತ್ತಿರುವ ನಗರಕ್ಕೆ ಶೋಭೆಯಲ್ಲ. ಆಡಳಿತ ವ್ಯವಸ್ಥೆಗೆ ಇಂತಹ ಸೂಕ್ಷ್ಮಸಂಗತಿಗಳು ಪ್ರಧಾನವಾದಾಗ ಮಾತ್ರ ನಗರ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಲು ಸಾಧ್ಯ