ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಗಳು ಲಭ್ಯವಾಗಿವೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಅಲ್ತಾಫ್ ಮತ್ತು ಸವೇರಾ ರಿಚರ್ಡ್ ಕರ್ಡೋಜಾ ಎಂಬ ಇಬ್ಬರನ್ನು ಬಂಧಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ತಿಳಿಸಿದ್ದಾರೆ.
ಕಾರ್ಕಳದಲ್ಲಿ ನಿನ್ನೆ ನಡೆದಿದ್ದೇನು?
ಕಾರ್ಕಳ ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರ ಎಂಬಲ್ಲಿನ ಬೋವಿ ಸಮಾಜಕ್ಕೆ ಸೇರಿದ ಯುವತಿಯನ್ನು ಅನ್ಯಕೋಮಿನ ಆರೋಪಿಗಳು ಆರೋಪಿಸಿ, ಅಮಲು ಪದಾರ್ಥ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆಯನ್ನು ಇನ್‌ಸ್ಟಾಗ್ರಾಮ್ ಮೂಲಕ ಪರಿಚಯಿಸಿಕೊಂಡಿದ್ದ ಆರೋಪಿ ಬಂಗ್ಲೆಗುಡ್ಡೆಯ ಅಲ್ತಾಫ್ ಎಂಬಾತ, ಕಳೆದ 3-4 ತಿಂಗಳಿನಿಂದ ಮಾತನಾಡುತ್ತಿದ್ದ. ಶುಕ್ರವಾರ (ನಿನ್ನೆ) ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಯ್ಯಪ್ಪ ನಗರದ ಜೇನು ಕೃಷಿ ಸ್ಥಳಕ್ಕೆ ಬರುವಂತೆ ಯುವತಿಯನ್ನು ಆತ ಕರೆಸಿಕೊಂಡಿದ್ದ. ಅಲ್ಲಿಂದ ಆಕೆಯನ್ನು ಆತನ ಬಿಳಿ ಬಣ್ಣದ ಕಾರಿನಲ್ಲಿ ಬಲವಂತವಾಗಿ ಅಪಹರಿಸಿದ್ದ. ಕೌಡೂರು ಗ್ರಾಮದ ರಂಗನಪಲ್ಕೆ ಎಂಬಲ್ಲಿನ ಕಾಡಿನ ಪ್ರದೇಶವೊಂದಕ್ಕೆ ಆಕೆಯನ್ನು ಕರೆದೊಯ್ದಿದ್ದಾನೆ. ಅಲ್ಲಿಗೆ ಆತನ ಸ್ನೇಹಿತ ಸವೇರಾ ರಿಚರ್ಡ್ ಎರಡು ಬಿಯರ್ ಬಾಟಲಿ ತಂದಿದ್ದು, ಬಿಯರ್‌ಗೆ ಮತ್ತು ಬರಿಸುವ ಪದಾರ್ಥ ಸೇರಿಸಿ ಯುವತಿಗೆ ಬಲವಂತವಾಗಿ ಕುಡಿಸಿದ್ದಾರೆನ್ನಲಾಗಿದೆ. ಆಕೆ ತನ್ನ ಸ್ಥಿಮಿತ ಕಳೆದುಕೊಂಡ ಬಳಿಕ ಆಕೆಯ ಮೇಲೆ ಅಲ್ತಾಫ್ ಮತ್ತು ಆತನ ಸ್ನೇಹಿತರು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ನಂತರ ಸ್ವತಃ ಅಲ್ತಾಫ್ ತನ್ನ ಕಾರಿನಲ್ಲಿ ಯುವತಿಯನ್ನು ಆಕೆಯ ಮನೆಮುಂದೆ ತಂದು ಬಿಟ್ಟಿದ್ದ ಎನ್ನಲಾಗಿದೆ.
ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ವಾಹನವನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನು ಕಾರ್ಕಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಷಯ ತಿಳಿದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದರು. ಘಟನೆಗೆ ಕಾರ್ಕಳದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿದೆ. ವಿವಿಧ ಸಂಘಟನೆಗಳ ಪ್ರಮುಖರು ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.