ಕಾರ್ಕಳದ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿ ಆ.19
ರಂದು ಪ್ರಥಮ ಬಿಕಾಂ ಪದವಿಗೆ ನೂತನವಾಗಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ
ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಪ್ರದೀಪ್ ಜೈನ್ ಪ್ರಾಂಶುಪಾಲರು, ಎಸ್ ಎನ್ ವಿ ಪಿಯು
ಕಾಲೇಜು ಕಾರ್ಕಳ ಇವರು ಆಗಮಿಸಿ ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಮ್ಮ
ದಿಕ್ಸೂಚಿ ಭಾಷಣದಲ್ಲಿ ವಿದ್ಯಾರ್ಥಿಗಳು ತಮ್ಮ ದೂರದರ್ಶಿತ್ವ ಚಿಂತನೆಗಳೊಂದಿಗೆ ಭವಿಷ್ಯವನ್ನು
ರೂಪಿಸಿಕೊಳ್ಳಲು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ
ಪ್ರಾಂಶುಪಾಲರಾದ ಡಾ ಕಿರಣ್ ಎಂ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳು ಪದವಿಯೊಂದಿಗೆ ವಿವಿಧ
ಕೌಶಲ್ಯಗಳನ್ನು ಗಳಿಸಿಕೊಂಡು ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯನ್ನು ಮಾಡಿಕೊಳ್ಳಬೇಕು ಎಂದು ಹಿತವಚನ ನೀಡಿದರು.
ಕಾಲೇಜಿನ ಐ ಕ್ಯೂ ಎ ಸಿ ಸಂಚಾಲಕರಾದ ಶ್ರೀಮತಿ ಸುಷ್ಮಾ ರಾವ್ ಕೆ ಅತಿಥಿಗಳನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಚಂದ್ರಾವತಿ ಅವರು
ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಜ್ಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಮತ್ತು ಐ ಕ್ಯೂ ಎ ಸಿ
ಸಂಚಾಲಕರಾದ ಶ್ರೀಮತಿ ಸುಷ್ಮಾ ರಾವ್ ಕೆ, ಸ್ನಾತಕೋತ್ತರ ವಿಭಾಗದ ಸಂಚಾಲಕರಾದ ಡಾ.
ವಿದ್ಯಾಧರ ಹೆಗ್ಡೆ, ಸಹಪ್ರಾಧ್ಯಾಪಕರಾದ ಡಾ. ಗಣೇಶ್ , ಗ್ರಂಥಪಾಲಕರಾದ ಶ್ರೀ. ವೆಂಕಟೇಶ್,
ವಾಣಿಜ್ಯಶಾಸ್ತ್ರ ಸಹಪ್ರಾಧ್ಯಾಪಕರಾದ ಡಾ. ಸುದರ್ಶನ್ ಪಿ , ಸಹಾಯಕ ಪ್ರಾಧ್ಯಾಪಕರಾದ
ಪ್ರೊಫೆಸರ್ ಮೈತ್ರಿ ಉಪಸ್ಥಿತರಿದ್ದರು.
ಸಹಪ್ರಾಧ್ಯಾಪಕರಾದ ಡಾ ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಸಂಗೀತ ಮತ್ತು ಬಳಗದವರು ಪ್ರಾರ್ಥಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಜಯ ಭಾರತಿಯವರು
ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಎಸ್ಇಪಿ, ಗ್ರಂಥಾಲಯ, ಕ್ರೀಡೆ ಹಾಗೂ ಪಠ್ಯೇತರ
ಚಟುವಟಿಕೆಗಳ ಕುರಿತಾಗಿ ಕಾಲೇಜಿನ ಉಪನ್ಯಾಸಕ ವರ್ಗದವರು ಅಧಿವೇಶನವನ್ನು ನಡೆಸಿಕೊಟ್ಟರು.
ಬಿಕಾಂ ಪ್ರವೇಶಾತಿ ಪಡೆದ ಸುಮಾರು 140 ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನವನ್ನು
ಪಡೆದುಕೊಂಡರು.