‘ತಗೊರಿ ಮಿತ್ತ್ ದ ಮಣ್ಣ್’ ಅನುವಾದಿತ ಕವನ ಸಂಕಲನ ಪ್ರಶಸ್ತಿಗೆ ಆಯ್ಕೆ
ಮಂಗಳೂರು :ಖ್ಯಾತ ತುಳು ಸಾಹಿತಿ, ಲೇಖಕಿ, ‘ಕುವಿಕು ಕಣ್ವತೀರ್ಥ’ಎಂಬ ಕಾವ್ಯನಾಮದೊಂದಿಗೆ ತುಳು ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತರಾಗಿರುವ ಕುಶಲಾಕ್ಷಿ.ವಿ ಕುಲಾಲ್ ಕಣ್ವತೀರ್ಥ ಇವರಿಗೆ 2023ನೇ ಸಾಲಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯ ಅನುವಾದ ವಿಭಾಗದಲ್ಲಿ ಇವರ ಅನುವಾದಿತ ಕವನ ಸಂಕಲನ ‘ತಗೊರಿ ಮಿತ್ತ್ ದ ಮಣ್ಣ್’ ಗೆ ಪ್ರಶಸ್ತಿಗೆ ಆಯ್ಕೆಯಾಗಿದೆ.
ಕೇರಳ ಕರ್ನಾಟಕದ ಗಡಿ ಪ್ರದೇಶವಾದ ಪೌರಾಣಿಕ ಹಿನ್ನಲೆಯುಳ್ಳ ಕಣ್ವತೀರ್ಥವೆಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಪ್ರಾರ್ಥಮಿಕ ಶಿಕ್ಷಣವನ್ನು ಸರಕಾರಿ ಪ್ರೌಢ ಶಾಲೆ ಬಿಜೈ ಕಾಪಿಕಾಡ್ ನಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಸರಕಾರಿ ಹೈಸ್ಕೂಲ್ ಕುಂಜತ್ತೂರಿನಲ್ಲಿ ಕಲಿತು ಕೃಷಿ ಬದುಕನ್ನು ನೆಚ್ಚಿಕೊಂಡವರು ಶ್ರೀಮತಿ ಕುಶಲಾಕ್ಷಿ.ವಿ ಕುಲಾಲ್ ಕಣ್ವತೀರ್ಥ.
ಎಳವೆಯಲ್ಲಿಯೇ ಕವನಗಳನ್ನು ಬರೆಯುವ ಹವ್ಯಾಸವಿದ್ದರೂ ಸರಿಯಾದ ಪ್ರೋತ್ಸಾಹ ಸಿಗದೇ ಬರೆದ ಕವನಗಳು ರದ್ದಿಗೆ ಸೇರಿದ್ದೇ ಹೆಚ್ಚು.ಕಣ್ವತೀರ್ಥದ ವಾಸು ಕುಲಾಲರನ್ನು ವಿವಾಹವಾದ ನಂತರ ಗೃಹಿಣಿಯಾಗಿ ತನ್ನ ಬರವಣಿಗೆಯನ್ನು ಮುಂದುವರಿಸಿದರು.ಪತಿಯ ಪ್ರೋತ್ಸಾಹ ಹಾಗೂ ಕಾಸರಗೋಡು ಕುಲಾಲ ಸುಧಾರಕ ಸಂಘದ ಸಮಾಜ ಬಾಂಧವರ ಪ್ರೇರಣೆಯಿಂದ ಇವರ ಮೊದಲ ಕೃತಿ ‘ಸುರೂತ ಪನಿ’ 2007 ರಲ್ಲಿ ಬಿಡುಗಡೆಗೊಂಡಿತು.
ನಂತರದ ದಿನಗಳಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತುಕೊಟ್ಟು ಬರವಣಿಗೆಯನ್ನು ಸಂಪೂರ್ಣ ನಿಲ್ಲಿಸಿದ್ದ ಇವರು 2017ರಲ್ಲಿ ತಮ್ಮ ಎರಡನೇಯ ಕೃತಿ ‘ರಡ್ಡ್ ಪನಿ’ ಯನ್ನು ಬಿಡುಗಡೆ ಗೊಳಿಸಿದರು.ಅದೇ ಸಮಯದಲ್ಲಿ ಸುರತ್ಕಲ್‌ನ ದಿತೇಶ್ ಮೂಲ್ಯ ರವರು ಇವರನ್ನು ‘ತುಲು ಒರಿಪುಗ’ ಎಂಬ ವಾಟ್ಸಪ್ ಗ್ರೂಪಿಗೆ ಪರಿಚಯಿಸಿದರು.ಅಲ್ಲಿಂದ ಇವರ ಬರವಣಿಗೆಯು ಲೋಕಕ್ಕೆ ಪರಿಚಯವಾಯಿತು.
ಮುಂದಕ್ಕೆ ‘ಮೌನ ಕೋಗಿಲೆ’ ಎಂಬ ಸಾಹಿತ್ಯ ಬಳಗದ ಮುಖೇನ ಹಲವು ಸಾಹಿತ್ಯಾಸಕ್ತರ ಬಳಗಗಳಿಗೆ ಪರಿಚಯಿಸಲ್ಪಟ್ಟು ತುಳುನಾಡಿನಾಧ್ಯಂತ ಹಾಗೂ ದೇಶ ವಿದೇಶಗಳಲ್ಲಿ ಇವರ ಬರಹದ ಅಭಿಮಾನಿಗಳು ತುಂಬಿಕೊಂಡರು. ನಂತರದ ದಿನಗಳಲ್ಲಿ ‘ಪನಿ ಮುತ್ತು ಮಾಲೆ’ಕವನ ಸಂಕಲನ ,ಪತ್ತ್ ಪನಿ ತೀರ್ಥ’ ಎಂಬ ಕಿರು ಲೇಖನಗಳ ಸಂಗ್ರಹ,’ಕಡಲ ಮುತ್ತು’, ಹಾಗೂ’ಆಸ್ತಿ’ ಎಂಬ ಎರಡು ಕಾದಂಬರಿ,’ಸೀಕ್ ಸಂಕಡ ಇಲ್ಲ ಪಾತೆರ ಬೈದ್ಯೆರೆನ ಕೆಬಿ ಪಾತೆರ’ ಎಂಬ ಅನುವಾದಿತ ವೈದ್ಯಕೀಯ ಲೇಖನ,’ನಡಪುನ ಶಬ್ದ ಕೋಶ ಡಿ.ಎಂ.ಕುಲಾಲ್’ ಎಂಬ ದಿ| ಡಿ.ಯಂ ಕುಲಾಲರ ವ್ಯಕ್ತಿ ಪರಿಚಯ, ‘ತಗೊರಿ ಮಿತ್ತ್‌ದ ಮಣ್ಣ್’ಎಂಬ ಅನುವಾದಿತ ಕವನ ಸಂಕಲನ,ಹೀಗೆ ಒಟ್ಟು ಒಂಬತ್ತು ತುಲು ಕೃತಿಗಳನ್ನು ರಚಿಸಿದ್ದಾರೆ.
ಇವರ ಕಡಲ ಮುತ್ತು ಕಾದಂಬರಿಗೆ ಉಡುಪಿ ತುಳುಕೂಟ ನೀಡುವ ಪ್ರತಿಷ್ಠಿತ ಫಣಿಯಾಡಿ ಪ್ರಶಸ್ತಿ,ಪನಿ ಮುತ್ತು ಮಾಲೆ ಕೃತಿಗೆ ಕರ್ನಾಟಕ ತುಲು ಸಾಹಿತ್ಯ ಅಕಾಡೆಮಿ ಪುಸ್ತಕ
ಪ್ರಶಸ್ತಿ ಈ ಹಿಂದೆ ದೊರೆತಿದ್ದು ಇತೀಚೆಗೆ 2023ರ ಕರ್ನಾಟಕ ತುಲು ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯ ಅನುವಾದ ವಿಭಾಗದಲ್ಲಿ ಇವರ ಅನುವಾದಿತ ಕವನ ಸಂಕಲನ ‘ತಗೊರಿ ಮಿತ್ತ್ ದ ಮಣ್ಣ್’ ಗೆ ಬಂದಿರುತ್ತದೆ.
ತುಲು ನಾಡಿನ ಆಚಾರ,ವಿಚಾರ,ಜೀವನವನ್ನು ಪ್ರೀತಿಸುವ ಇವರು ಬಡ ಕೃಷಿ ಕುಟುಂಬದಲ್ಲಿ ಜನಿಸಿದ ಸಾಹಿತ್ಯ ಸಿರಿವಂತಿಕೆಯ ಮಗಳು ಎಂದರೆ ತಪ್ಪಾಗಲಾರದು.ಇವರ ಲೇಖನ ವಾಚನಗಳಾದ ‘ತುಲುನಾಡ್‌ದ ಅಟಿಲ್’,’ಸೆರಂಗ್’,ಮುಳಿತ ಇಲ್ಲ್‌ದ ನೆಂಪು’ಗಳು ಆಕಾಶವಾಣಿಯಲ್ಲಿ ಮತ್ತು ರೇಡಿಯೋ ಸಾರಂಗ್ ನಲ್ಲಿ ಪ್ರಚಾರವಾಗಿ ಈಗಲೂ ಅಂತರ್ಜಾಲದಲ್ಲಿ ತಿರುಗುತ್ತಾ ಜನಮೆಚ್ಚುಗೆಯನ್ನು ಪಡೆದಿದೆ.
ಇವರ ಹಲವು ಕವನಗಳು ರಾಗ ಸಂಯೋಜನೆ ಗೊಂಡು ಯು ಟ್ಯೂಬ್ ಗಳಲ್ಲಿ ಪ್ರಚಾರದಲ್ಲಿ ಇದೆ.ಹಲವು ಭಕ್ತಿ ಗೀತೆಗಳನ್ನೂ ರಚಿಸಿದ್ದಾರೆ.ಮಕ್ಕಳ ನಾಟಕ,ಕಿರು ನಾಟಕ,ಕಿರುಕತೆಗಳನ್ನೂ ರಚಿಸಿರುವ ಇವರ ಹತ್ತನೆ ಕೃತಿಯು ಮುದ್ರಣದ ಹಂತದಲ್ಲಿದೆ.
ಯಾವುದೇ ಪ್ರಶಸ್ತಿ, ಸನ್ಮಾನಗಳನ್ನು ಬಯಸದೆ ತುಲು ಬರವಣಿಗೆಯಲ್ಲಿ ತೊಡಗಿಸಿಕೊಂಡ ಇವರಿಗೆ ಒಲಿದು ಬಂದ ಪ್ರಶಸ್ತಿಗಳು, ಸನ್ಮಾನಗಳು ಹಲವಾರು.ಇದೆಲ್ಲವೂ ತುಲುವಪ್ಪೆಯ ಪ್ರಸಾದವೆಂದು ಹೇಳುವ ಇವರು ಇದರ ಹಿಂದಿನ ಗೆಲುವು ಸಮಸ್ತ ತುಳುವರಿಗೆ ಸಲ್ಲುತ್ತದೆ ಎನ್ನುತ್ತಾರೆ.
ಪ್ರಶಸ್ತಿ, ಸನ್ಮಾನಗಳಲ್ಲಿ ದೊರೆತ ಆರ್ಥಿಕ ಸಹಾಯವನ್ನು ನವ ಸಾಹಿತಿಗಳಿಗೆ ಕೃತಿ ಮುದ್ರಣಕ್ಕೆ ಸಹಾಯ ರೂಪದಲ್ಲಿ ಕೊಡುತ್ತಿದ್ದಾರೆ.ಹಾಗೂ ಮಕ್ಕಳಲ್ಲಿ ಸಾಹಿತ್ಯ ಆಸಕ್ತಿಯನ್ನು ಬೆಳೆಸಲು ವ್ಯಯಿಸುತಿರುವುದು ಶ್ಲಾಘನೀಯ.ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವರು. ಅನಿರೀಕ್ಷಿತ ಎಂಬಂತೆ ಇವರು ಬರೆದ ಒಂದು ಗೀತೆಯು ಸಂತೋಷ್ ಮಾಡ ನಿರ್ದೇಶನ,ರಮೇಶ್ ಮಂಜೇಶ್ವರ ಕತೆ ಸಂಭಾಷಣೆ ಬರೆದ, ಕರ್ನಾಟಕ ಕನ್ನಡ ಚಲನಚಿತ್ರೋತ್ಸವದಲ್ಲಿ ದ್ವಿತೀಯ ಪ್ರಶಸ್ತಿಯನ್ನು ಪಡೆದ ‘ಪಿದಾಯಿ’ ಚಲನಚಿತ್ರದಲ್ಲಿ ಇರುವುದು ತನಗೆ ತುಲುವಪ್ಪೆ ಕೊಟ್ಟ ಸೌಭಾಗ್ಯವೆಂದು ಹೇಳುತ್ತಾರೆ.
‘ಕುವಿಕು ಕಣ್ವತೀರ್ಥ’ಎಂಬ ಕಾವ್ಯನಾಮದೊಂದಿಗೆ ಯಾವುದೇ ಗುರುವಿಲ್ಲದ ಸಾಹಿತ್ಯ ಸಾಧನೆ ಇವರದ್ದು, ಸಾಹಿತ್ಯ ಎನ್ನುವುದು ನಿಂತ ನೀರಲ್ಲ,ಅದು ಹರಿಯುತ್ತಾ ಇರುತ್ತದೆ.ಬೊಗಸೆಯಲ್ಲಿ ತುಂಬಿಕೊಳ್ಳುವ ಪ್ರಯತ್ನ ಯಾರು ಬೇಕಾದರೂ ಮಾಡಬಹುದು.ಪ್ರಯತ್ನ ಮುಖ್ಯ ಎನ್ನುವ ಶ್ರೀಮತಿ ಕುಶಲಾಕ್ಷಿ.ವಿ.ಕುಲಾಲರ ಸ್ವಪ್ರಯತ್ನದಿಂದ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಇತರರಿಗೆ ಮಾದರಿ. ಅರ್ಹವಾಗಿಯೇ ಪ್ರಶಸ್ತಿ ಬಂದಿರುವ ಇವರಿಗೆ ಕೋಸ್ಟಲ್ ಬುಲೆಟಿನ್ ಬಳಗದಿಂದ ತುಂಬು ಹೃದಯದ ಅಭಿನಂದನೆಗಳು.